ಉದಯವಾಹಿನಿ ಕೋಲಾರ :- ನಗರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ  ಇಂದಿರಾ ಕ್ಯಾಂಟೀನ್ ಮತ್ತು ಸಾರ್ವಜನಿಕ ಗ್ರಂಥಾಲಯ  ತೆರೆಯುವಂತೆ ಒತ್ತಾಯಿಸಿ  ಕನ್ನಡಸೇನೆ ಜಿಲ್ಲಾ ಘಟಕದ  ವತಿಯಿಂದ  ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್ ಕುಮಾರ್ ರವರಿಗೆ ಮನವಿ  ಸಲ್ಲಿಸಲಾಯಿತು. ಕನ್ನಡಸೇನೆ ಕೋಲಾರ  ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ ಕೋಲಾರ ನಗರದ ಮಧ್ಯ ಭಾಗದಲ್ಲಿ ಎಸ್‌.ಎನ್‌.ಆರ್. ಜಿಲ್ಲಾಸ್ಪತ್ರೆ ಇದ್ದು, ಆಸ್ಪತ್ರೆಗೆ ದಾಖಲಾಗುವ ಹಾಗೂ ಹೊರ ರೋಗಿಗಳು ಬಡವರಾಗಿದ್ದು, ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟಕ್ಕೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದರೆ ಬಹಳಷ್ಟು ಬಡವರಿಗೆ ಅನುಕೂಲವಾಗುತ್ತದೆ ಎಂದರು.ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ರೋಗಿಗಳ ಜೊತೆಯಲ್ಲಿ ಬರುವ ಸಂಬಂಧಿಕರುಗಳಿಗೆ ಹಾಗೂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಿಡುವಿನ ವೇಳೆಯಲ್ಲಿ ಜ್ಞಾನಾರ್ಜನೆ ಪಡೆಯಲು ಅನುಕೂಲವಾಗುವಂತೆ ಒಂದು ಸಾರ್ವಜನಿಕ ಗ್ರಂಥಾಲಯ ಅಗತ್ಯವಿದೆ. ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮಾನ್ಯ ಶಾಸಕರುಗಳ  ಸಭೆಯಲ್ಲಿ ಹೆಚ್ಚಿನ ರೀತಿಯಲ್ಲಿ ಗ್ರಂಥಾಲಯದ ಉಪಯೋಗವನ್ನು ಪಡೆಯಲು ಸೂಚಿಸಿರುತ್ತಾರೆ.  ಆದ್ದರಿಂದ  ಜಿಲ್ಲಾ ಆಸ್ಪತ್ರೆಯಲ್ಲಿ  ಸಾರ್ವಜನಿಕ ಗ್ರಂಥಾಲಯ ಶಾಖೆ ಹಾಗೂ ಇಂದಿರಾ ಕ್ಯಾಂಟೀನ್ ತೆರೆದರೆ ಸಾರ್ವಜನಿಕರಿಗೆ ಉಪಯೋಗ ವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ  ಕನ್ನಡ ಸೇನೆ  ಗೌರವ ಅಧ್ಯಕ್ಷ ಪಿ.ನಾರಾಯಣಪ್ಪ, ಎಸ್.ಸಿ.ವೆಂಕಟಕೃಷ್ಣಪ್ಪ, ನಗರಾಧ್ಯಕ್ಷ ನಾಗೇಶ್, ಸಂಚಾಲಕರಾದ ರಂಜಿತ್,ಮುನಿಕೃಷ್ಣಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!