ಉದಯವಾಹಿನಿ ಕುಶಾಲನಗರ :-ವಿಶ್ವಕರ್ಮ ಎಂದರೆ ಸೃಷ್ಟಿಯ ಕರ್ತ, ಸೃಷ್ಟಿಯು ದೇವತೆಯ ಮೂಹರ್ತ ರೂಪವಾಗಿದೆ. ಆ ದಿಸೆಯಲ್ಲಿ ವಿಶ್ವಕರ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟ ಸಹಕಾರದಲ್ಲಿ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಕುಲ ಕಸುಬುಗಳನ್ನು ಗೌರವಿಸಬೇಕು. ಕರಕುಶಲ ಕರ್ಮಿಗಳು ಅನಾದಿಕಾಲದಿಂದಲೂ ಸಮಾಜಕ್ಕೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ ಎಂದರು.‘ಶಿಲ್ಪಿ, ಕಲಾಶ್ರೀ ಪ್ರಶಸ್ತಿ ವಿಜೇತರಾದ ಮಂಜುನಾಥ ಆಚಾರ್ಯ ಅವರು ಮಾತನಾಡಿ ವಿಶ್ವಕರ್ಮರು ಭಾರತೀಯ ಸಂಸ್ಕೃತಿಯ ಪ್ರತಿಪಾದಕರು ಹಾಗೂ ರಾಯಭಾರಿಗಳು ಎಂದು ಪ್ರತಿಪಾಧಿಸಿದ್ದಾರೆ.’ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಎಸ್.ಜೆ.ದೇವದಾಸ್ ಅವರು ಮಾತನಾಡಿ ವಿಶ್ವಕರ್ಮ ಸಮಾಜವು ಜಿಲ್ಲೆಯಲ್ಲಿ ೩೦ ರಿಂದ ೪೦ ಸಾವಿರ ಜನಸಂಖ್ಯೆ ಇದೆ. ವಿಶ್ವಕರ್ಮ ಜಯಂತ್ಯುತ್ಸವನ್ನು ಸಮಾಜದವರು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ ಎಂದರು.ಸರ್ಕಾರ ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ೧೩ ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಇದೊಂದು ಶ್ಲಾಘನೀಯ ಕಾರ್ಯ ಎಂದರು. ಮಡಿಕೇರಿ ನಗರ ದಸರಾ ಸಮಿತಿ ನೂತನ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮಾತನಾಡಿ ೨೫ ವರ್ಷಗಳಿಂದ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸಿಕೊಂಡು ಬರಲಾಗಿದೆ. ಕಳೆದ ೮ ವರ್ಷಗಳಿಂದ ಸರ್ಕಾರದಿಂದ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ವಿಶ್ವಕರ್ಮ ಸಮಾಜದ ಹೆಸರಿಗೆ ಆರ್‌ಟಿಸಿ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿ ಅವರಲ್ಲಿ ಕೋರಿದರು. ಪ್ರಭಾರ ಜಿಲ್ಲಾಧಿಕಾರಿ ವರ್ಣಿತ್ ನೇಗಿ ಮತ್ತು ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕರಾದ ಎಚ್.ಎನ್.ಸುಬ್ರಮಣ್ಯ.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಮಾತನಾಡಿದರು.ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಿ.ಜಗದೀಶ್ ಆಚಾರ್ಯ(ಮಡಿಕೇರಿ), ಎಸ್.ಬಿ.ಯಶವಂತ್ ಆಚಾರ್ಯ(ಸೋಮವಾರಪೇಟೆ), ವಿಶ್ವ ಕರ್ಮ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ವಿದ್ಯಾ, ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜು, ಅಶೋಕ್ ಇತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಶ್ರೀಧರ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.
