
ಉದಯವಾಹಿನಿ, ದೇವರಹಿಪ್ಪರಗಿ: ಸದಸ್ಯರ ಸಹಕಾರ, ರೈತರು ಮತ್ತು ಜನರಿಂದ ಅಧಿಕ ಡೆಪಾಸಿಟ್ ಮೊತ್ತ ಸಂಗ್ರಹಣೆ ಆದರೆ ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸಿ ಜನೋಪಯೋಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.ತಾಲೂಕಿನ ಕೋರವಾರ ಗ್ರಾಮದಲ್ಲಿ ಗುರುವಾರದಂದು ಪಿಕೆಪಿಎಸ್ ಬ್ಯಾಂಕಿನ ಆವರಣದಲ್ಲಿ ನಡೆದ 2022-23ನೇ ಸಾಲಿನ, 97ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಸಂಘದ ಎಲ್ಲಾ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು, ಸಹಕಾರಿ ಸಂಘದ ಮೂಲಕ ರೈತರಿಗೆ ಅಭಿವೃದ್ಧಿಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಗೆ ಸಹಕಾರ ನೀಡಬೇಕಾಗುತ್ತದೆ. ಪ್ರತಿಯೊಬ್ಬ ಸದಸ್ಯರು ಸಾಲ ಮರುಪಾವತಿ ಸರಿಯಾದ ಸಮಯಕ್ಕೆ ಮಾಡಿದಾಗ ಮಾತ್ರ ಸಂಘ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷರಾದ ಸಂಗಮೇಶ ಛಾಯಗೋಳ ಅವರು ಮಾತನಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತಾಲೂಕಿನಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ. ಈ ವರ್ಷ ಸಂಘವು ಸುಮಾರು 13ಲಕ್ಷಕ್ಕಿಂತ ಹೆಚ್ಚು ಲಾಭಗಳಿಕೆಯಾಗಿದೆ. ಸರ್ವಸದಸ್ಯರ ಒಮ್ಮತದ ಮೇರೆಗೆ ಈ ವರ್ಷದಿಂದ ಬಂಗಾರದ ಮೇಲೆ ಆಸ್ತಿಗಳನ್ನು ಪ್ಲೆಜ್ ಮಾಡಿ ಸಾಲ ಕೊಡಲು ತೀರ್ಮಾನಿಸಲಾಗಿದೆ. ವರ್ಷದ ವರದಿ ವಾಚನವ ಮಾಡಿ ಸಂಘದ ಬೆಳವಣಿಗೆಗೆ ನಿಮ್ಮೆಲ್ಲರ ಅತ್ಯುನ್ನತ ಸಹಕಾರದಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ದೇವರಹಿಪ್ಪರಗಿ ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಘದ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಗತಿಪರ ರೈತರು, ವರ್ಗಾವಣೆಗೊಂಡ ಹಾಗೂ ನಿವೃತ್ತಿಯಾದ ಶಿಕ್ಷಕರಿಗೆ, ಗ್ರಾಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾಗೂ ಮುಖ್ಯ ಅತಿಥಿಗಳಾದ ಡಾ ಪ್ರಭುಗೌಡ ಲಿಂಗದಳ್ಳಿ ಚಬನೂರ ಹಾಗೂ ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಮಲ್ಲನಗೌಡ ಬಿರಾದಾರ, ಬಸನಗೌಡ ಬಿರಾದಾರ, ಬಸನಗೌಡ ಪೊಲೀಸ್ ಪಾಟೀಲ್, ಅಪ್ಪು ಗೌಡ ಪಾಟೀಲ, ಸಂಘದ ಉಪಾಧ್ಯಕ್ಷರಾದ ಚಿದಾನಂದ ಚವ್ಹಾಣ, ನಿರ್ದೇಶಕರುಗಳಾದ ಸುಬ್ಬನಗೌಡ ಪೊಲೀಸ್ ಪಾಟೀಲ, ಹನುಮಂತರಾಯ ಸುಂಬಡ, ಗುರಣ್ಣ ಸೌಕಾರ ಅಂಗಡಿ, ಭೋಜಪ್ಪಗೌಡ ಬಿರಾದಾರ, ಸಂತೋಷಗೌಡ ಪೊಲೀಸ್ ಪಾಟೀಲ, ಬಿ.ಸಿ.ಹೊನಮಟ್ಟಿ, ಇಸ್ಮಾಯಿಲ ವಡಗೇರಿ,ಪ್ರಭಯ್ಯ ಮೇಲಿನಮಠ, ಕಾರ್ಯದರ್ಶಿಗಳಾದ ಶಾಂತಗೌಡ ಬೋರಾವತ, ಸಿಬ್ಬಂದಿಗಳಾದ ಗುಂಡು ಚವ್ಹಾಣ, ಮಲ್ಲು ಕೆಮಶೆಟ್ಟಿ, ಮಲ್ಲು ಜಾಲವಾದಿ, ಬನ್ಯಪ್ಪ ವನಹಳ್ಳಿ, ನಜೀರ ಚಾಂದಕವಟೆ ಸೇರಿದಂತೆ ರೈತ ಸಂಘಟನೆಯ ಅಧ್ಯಕ್ಷ, ಗೌರವಾಧ್ಯಕ್ಷರು, ಗಣ್ಯರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
