
ಉದಯವಾಹಿನಿ,ಶಿಡ್ಲಘಟ್ಟ: ಮಕ್ಕಳ ಕಲಿಕೆಗೆ ಪ್ರೇರಕ ಶಕ್ತಿ ಪ್ರತಿಭಾ ಕಾರಂಜಿ. ಇದು ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅಷ್ಟೇ ಅಲ್ಲ ವರ್ಷಂಪ್ರತಿ ಪಾಠಗಳನ್ನು ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ ಎಂದು ಶಿಡ್ಲಘಟ್ಟ ತಾಲ್ಲೂಕು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಭಾಸ್ಕರ್ ಗೌಡ ತಿಳಿಸಿದರು.ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ಪಟ್ಟಣ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಸುಪ್ತ ಜ್ಞಾನವನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಉತ್ತಮವಾಗಿದೆ. ವಿದ್ಯಾರ್ಥಿಗಳು ಕೇವಲ ಪಾಠ ಪ್ರವಚನಗಳಿಗೆ ಸೀಮಿತರಾಗದೆ, ತಮ್ಮಲ್ಲಿರುವ ವಿವಿಧ ರೀತಿಯ ಜ್ಞಾನ, ಕೌಶಲ್ಯವನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಮಕ್ಕಳ ಅಭಿರುಚಿಗೆ ಹಾಗೂ ಕಲಿಕಾ ಆಸಕ್ತಿಗೆ ಅನುಗುಣವಾಗಿ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವುದರಿಂದ ಒಮ್ಮೆ ಸೋತರೂ ಸತತ ಪ್ರಯತ್ನದ ಪರಿಶ್ರಮದಿಂದ ಗೆಲವು ಸಾಧ್ಯ ಎಂಬುದನ್ನು ಅರಿಯುತ್ತಾರೆ. ಇದರಿಂದಾಗಿ ನಿಮ್ಮ ಮನಸ್ಸು ಮಾನಸಿಕ ಮತ್ತು ದೈಹಿಕವಾಗಿ ದೃಢವಾಗುತ್ತದೆ ಎಂದು ಶಿಕ್ಷಣ ಸಮನ್ವಯಾಧಿಕಾರಿ ತ್ಯಾಗರಾಜ್ ಅಭಿಪ್ರಾಯಪಟ್ಟರು. ಪ್ರತಿಭಾ ಕಾರಂಜಿಯಲ್ಲಿ ಇಸ್ರೋದ ಚಂದ್ರಯಾನದ ರಾಕೆಟ್ ಮತ್ತು ಶ್ರೀ ವೆಂಕಟೇಶ್ವರ ಕಲ್ಯಾಣ ಆಕರ್ಷಕವಾಗಿತ್ತು, ನಗರದ ಎಲ್ಲಾ ಶಾಲೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೂಪಸಿ ರಮೇಶ್ ,ಅಧ್ಯಕ್ಷ ಕೃಷ್ಣಯ್ಯಶೆಟ್ಟಿ, ಸಿಆರ್ ಪಿ ರಮೇಶ್, ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ವಿಸ್ಡಂ ನಾಗರಾಜ್, ಪರಿಮಳಾ, ಮಂಜುನಾಥ್, ಸುಂದರಾಚಾರಿ, ಸುದರ್ಶನ್. ಮುಖ್ಯ ಶಿಕ್ಷಕ ಶಿವಕುಮಾರ್ ಮುಂತಾದವರು ಉಪಸ್ಥಿತ ರಿದ್ದರು.
