
ಉದಯವಾಹಿನಿ ಶಿಡ್ಲಘಟ್ಟ: ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೂರ್ವ ಸಿದ್ಧತೆ ಕೈಗೊಳ್ಳುವಂತೆ ತಾಲ್ಲೂಕು ದಂಡಾಧಿಕಾರಿ ಬಿ.ಎನ್ ಸ್ವಾಮಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಕ್ಟೋಬರ್ 2ರಂದು ನಡೆಯಲಿರುವ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಾಂಧಿ ಜಯಂತಿ ಅಂಗವಾಗಿ ಈ ವರ್ಷ ಪ್ರತಿಯೊಂದು ಕಚೇರಿಯು ಕಸ ಮುಕ್ತವಾಗಿರಬೇಕು. ಸಾಮೂಹಿಕ ಸ್ವಚ್ಛತೆ ಹಾಗೂ ವಿವಿಧ ಕಚೇರಿಗಳ ಒಳ ಹಾಗೂ ಹೊರ ಆವರಣ ಸ್ವಚ್ಛತೆಯಿಂದ ಕೂಡಿರಬೇಕು. ಹಾಗೆಯೇ ಯಾವುದೇ ಕಚೇರಿಯಲ್ಲಿಯೂ ಸಹ ಪ್ಲಾಸ್ಟಿಕ್ ಬಳಸುವಂತಿಲ್ಲ. ಗಾಂಧಿ ಜಯಂತಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲೇಬೇಕು, ಯಾವುದೇ ರೀತಿಯ ಕುಂಟು ನೆಪಗಳು ಹೇಳುವಂತಿಲ್ಲ, ತುರ್ತು ಕೆಲಸ ಬಿದ್ದಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸಿ ರಜೆ ಪಡೆದುಕೊಳ್ಳಬಹುದು ಅದನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿ ರಜೆಗೆ ಅವಕಾಶ ಕೊಡುತ್ತೇವೆ. ಒಂದು ವೇಳೆ ಹಾಜರಾಗದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಜಿ ಮುನಿರಾಜ,ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್,ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎ ನರೇಂದ್ರಕುಮಾರ್, ಬಿಸಿಎಂ ಅಧಿಕಾರಿ ಪಾಟೀಲ್,ಡಾ.ವೆಂಕಟೇಶ್ ಮೂರ್ತಿ,ಸಿ ಮುನಿರತ್ನಮ್ಮ, ಜಗದೇವಪ್ಪ ಗುಗ್ಗುರಿ,ಶ್ರೀನಿವಾಸ್, ಮೇಲೂರು ಮಂಜುನಾಥ್ ಮತ್ತಿತರರು ಇದ್ದರು.
