ಉದಯವಾಹಿನಿ ದೇವದುರ್ಗ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವಿನೂತನ ಕಾರ್ಯಕ್ರಮವಾಗಿದ್ದು, ಕಲಿಕಾ ಅಂತರ ಸರಿದೂಗಿಸಲು ಸೂಕ್ತ ವೇದಿಕೆಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ಹೇಳಿದರು. ಪಟ್ಟಣದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ, ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಮಿಂಚಲಿ. ಇಂತಹ ಕಾರ್ಯಕ್ರಮಗಳೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಎಂದರು. ಪ್ರತಿಭಾ ಕಾರಂಜಿ ಕಾರ್ಯಕ್ರಮವು ಎಲ್ಲ ರಂಗದಲ್ಲಿ ಆಸಕ್ತಿ ಇರುವ ಮಕ್ಕಳ ಪ್ರತಿಭೆಯನ್ನು ಪ್ರೇರೇಪಿಸುತ್ತದೆ. ಮಕ್ಕಳಲ್ಲಿ ಅಡಗಿರುವ ಶಕ್ತಿಯನ್ನು ಗುರುತಿಸುವ ವಿಶೇಷ ಶಕ್ತಿ ಶಿಕ್ಷಕರಿಗಿದೆ. ಪಠ್ಯತರ ಚಟುವಟಿಕೆಗಳ ಜತೆ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲಾಗುತ್ತಿದೆ. ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ಪ್ರತಿಭೆಗಳು ಇದ್ದು, ಅವುಗಳ ಅನಾವರಣಕ್ಕೆ ಸೂಕ್ತ ಒಂದು ವೇದಿಕೆ ಬೇಕಿದೆ ಎಂದು ಹೇಳಿದರು. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತ ಕೆಲಸ ಶಿಕ್ಷಕರು ಮಾಡಬೇಕಿದೆ. ಅದಷ್ಟೋ ಪ್ರತಿಭೆಗಳು ಹೊಂದಿರುವಂತ ಮಕ್ಕಳಿಗೆ ಸೂಕ್ತ ವೇದಿಕೆಗಳು ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಅಂತಹ ಪ್ರತಿಭೆಗಳು ಗುರುತಿಸುವ ಕೆಲಸ ಶಿಕ್ಷಕರ ಮೇಲೆ ಹೆಚ್ಚಿನ ಜವಬ್ದಾರಿ ಇದೆ ಎಂದರು. ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲಾ ಮಕ್ಕಳು ಎಲ್ಲಾ ರಂಗದಲ್ಲಿ ಮುಂದೆ ಬರಬೇಕು. ಪಾಲಕರಿಗೆ, ಶಿಕ್ಷಕರಿಗೆ ಕೀರ್ತಿ ತರುವಂತ ಕೆಲಸ ಮಕ್ಕಳು ಮಾಡಬೇಕು ಎಂದು ಹೇಳಿದರು. ಒಂದೊಂದು ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇದ್ದಿರುತ್ತದೆ. ಅನಾವರಣಕ್ಕೆ ಸೂಕ್ತ ವೇದಿಕೆ ಬೇಕಿದೆ. ಅಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸ ಶಿಕ್ಷಕರು ಗಮನಹರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಕಸಾಪ ಅಧ್ಯಕ್ಷ ಎಚ್.ಶಿವರಾಜ, ಪಾದರ, ನೇಮಣ್ಣ, ರಂಗಯ್ಯ ಸೇರಿ ಬಿಆರ್‍ಪಿ, ಸಿಆರ್‍ಪಿ ಸೇರಿ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಇದ್ದರು.
