
ಉದಯವಾಹಿನಿ,ದೇವದುರ್ಗ: ಕೃಷಿ ಕೂಲಿಕಾರರಿಗೆ ಬರ ಪರಿಹಾರ ನೀಡುವುದು ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ನಂತರ ಸಂಘಟನೆ ಅಧ್ಯಕ್ಷ ಲಿಂಗಣ್ಣ ನಾಯಕ ಮಕಾಶಿ ಮಾತನಾಡಿ, ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿ ರಾಯಚೂರು ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಸಂಕಷ್ಟದಲ್ಲಿ ಇದ್ದು ರಾಜ್ಯ ಸರ್ಕಾರ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ರಾಜ್ಯದ 236 ತಾಲ್ಲೂಕುಗಳಲ್ಲಿ 195 ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ, 41 ತಾಲ್ಲೂಕುಗಳನ್ನು ಯಾವ ಮಾನದಂಡದ ಮೇಲೆ ಕೈಬಿಡಲಾಗಿದೆ ಎಂಬುದರ ಕುರಿತು ಸ್ಪಷ್ಟಪಡಿಸಬೇಕು. ಜಿಲ್ಲೆಯಲ್ಲಿ ಅದು ವಿಶೇಷವಾಗಿ ದೇವದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೃಷಿ ಕೂಲಿಕಾರರು ನಿತ್ಯ ಕೂಲಿ ಹರಿಸಿ ಜಿಲ್ಲೆಯಾದ್ಯಂತ ನಿತ್ಯ ಜನತೆ ಗುಳೆ ಹೋಗುತ್ತಿದ್ದಾರೆ. ಬರದ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಕೆಲಸ ಇಲ್ಲದೆ ತೀವ್ರ ತೊಂದರೆ ಉಂಟಾಗಿದೆ. ಜಿಲ್ಲೆಯಲ್ಲಿ ಕೂಲಿಕಾರರಿಗೆ ನರೇಗಾ ಯೋಜನೆ ಅಡಿ ತಕ್ಷಣವೇ ಕೆಲಸ ನೀಡಿ ಗುಳೆ ಹೋಗುವುದನ್ನು ತಪ್ಪಿಸಬೇಕು. ನರೇಗಾ ಅನುಷ್ಠಾನದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದರು.ಪ್ರತಿ ಕುಟುಂಬಕ್ಕೆ ಕನಿಷ್ಠ ₹ 10 ಸಾವಿರ 6 ತಿಂಗಳ ಕಾಲ ಬರ ಪರಿಹಾರ ನೀಡಬೇಕು.ಕೃಷಿಕೂಲಿಕಾರರ ವಿವಿಧ ಬ್ಯಾಂಕ್ ಗಳ ಸಾಲ ಹಾಗೂ ಖಾಸಗಿ ಸಾಲಗಳನ್ನು ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಶಿವನಗೌಡ ನಾಯಕ ಮದರಕಲ್,ಸಂಗಮೇಶ ಮೂಲಿಮನಿ, ಶಾಂತಕುಮಾರ್, ಆನಂದ, ಸುರೇಶ್ ಗೌಡ,ಹನುಮಂತ್ರಾಯ ಗಲಗ,ರಂಗನಾಥ ಗೆಜ್ಜೆ ಬಾವಿ, ಇದ್ದರು.
One attachment • Scanned by Gmail
