ಉದಯವಾಹಿನಿ, ಬೆಂಗಳೂರು: ತಮಿಳುನಾಡಿಗೆ ಮತ್ತೆ ೧೮ ದಿನ ೩ ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಚಾಮರಾಜನಗರದ ಮಲೈಮಹದೇಶ್ವರ ದೇವಸ್ಥಾನಕ್ಕಿಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಮಾದೇಶ್ವರನ ಬೆಳ್ಳಿ ರಥೋತ್ಸವದಲ್ಲಿ ಭಾಗಿಯಾದ ನಂತರ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ೧೮ ದಿನ ೩ ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಯಿಂದ ಬಿಡುವಂತೆ ನಿನ್ನೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಿಸಿದೆ. ಈ ಆದೇಶದ ಸಂಬಂಧ ರಾಜ್ಯದ ಕಾನೂನು ತಂಡದ ಜತೆ ಚರ್ಚಿಸಿದ್ದೇನೆ. ಕಾನೂನು ತಜ್ಞರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸೂಕ್ತ ಎಂದು ಹೇಳಿದ್ದಾರೆ ಎಂದರು.ಕಾನೂನು ತಜ್ಞರ ಸಲಹೆಯಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು.
ಕಾವೇರಿ ಜಲಾಯನ ಭಾಗದಲ್ಲಿ ಮಳೆ ಕೊರತೆಯಿಂದ ಜಲಾಶಯಗಳು ತುಂಬಿಲ್ಲ. ನಮ್ಮಲ್ಲೇ ನೀರಿಲ್ಲ. ಇನ್ನೂ ತಮಿಳುನಾಡಿಗೆ ನೀರು ಬಿಡುವುದು ಎಲ್ಲಿಂದ. ಹಾಗಾಗಿ ಮತ್ತೆ ೧೮ ದಿನ ೩ ಸಾವಿರ ಕ್ಯೂಸೆಕ್ ನೀರು ಹರಿಸುವ ಕಾವೇರಿ ನೀರು ನಿಯಂತ್ರಣದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *

error: Content is protected !!