ಉದಯವಾಹಿನಿ, ನವದೆಹಲಿ: ಚಂದ್ರನ ಅಂಗಳ ಪ್ರವೇಶಿಸಿ ಇತಿಹಾಸ ನಿರ್ಮಾಣ ಮಾಡಿದ ಬಳಿಕ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್-೧ ಕಕ್ಷೆಗೆ ಸೇರಿಸುವ ಹಾದಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇದೀಗ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಸ್ರೊ ಅಧ್ಯಕ್ಷ ಸೋಮನಾಥ್ ಅವರು, ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಶುಕ್ರವನ್ನು ಈಗಾಗಲೇ ಕಾನ್ಫಿಗರ್ ಮಾಡಲಾಗಿದೆ. ಭವಿಷ್ಯಕ್ಕಾಗಿ ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ,ಇದರಿಂದ ಅನ್ವೇಷಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಉದ್ದೇಶಿಸಿ ಮಾತನಾಡಿದ ಅವರು ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇದು ಪರಿಕಲ್ಪನೆಯ ಹಂತ. ಶುಕ್ರ ಮಿಷನ್‌ಗೆ ಈಗಾಗಲೇ ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶುಕ್ರ ಆಸಕ್ತಿದಾಯಕ ಗ್ರಹವಾಗಿದೆ ಮತ್ತು ಅದನ್ನು ಅನ್ವೇಷಿಸುವುದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
