ಉದಯವಾಹಿನಿ ಬಸವನಬಾಗೇವಾಡಿ: ಕ್ಷೇತ್ರದ ಅಭಿವೃದ್ದಿಗೆ ಮುಂದಾಗುತ್ತಾರೆ ಎಂದು ಕ್ಷೇತ್ರದ ಜನತೆ ಕನಸು ಕಟ್ಟಿಕೊಂಡಿದ್ದರೆ, ರೈತರ ಮನನೋಯಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಸಚಿವರೇ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲರ ಮೇಲೆ ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ(ಮನಗೂಳಿ) ವಾಗ್ದಾಳಿ ನಡೆಸಿದರು.
ಅವರು ಪಟ್ಟಣದಲ್ಲಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರೈತರು ದುಡ್ಡಿಗಾಗಿ ಆತ್ಮಹತ್ಯೆ ಎಂದಿಗೂ ಮಾಡಿಕೊಳ್ಳುವುದಿಲ್ಲ. ಈ ವಿಷಯ ಸಚಿವರಿಗೆ ಗೊತ್ತಿರಲಿ. ಸಚಿವರು ತಮ್ಮ ಪುತ್ರಿಯನ್ನು ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕಿಯನ್ನಾಗಿ ಪುತ್ರನನ್ನು ನಂದಿ ಸಕ್ಕರೆ ಸಹಕಾರಿ ಸಂಘಕ್ಕೆ ನಿರ್ದೇಶಕನನ್ನಾಗಿ ಆಯ್ಕೆ ಮಾಡಿಸಿದ್ದನ್ನು ನೋಡಿದರೆ ಎಲ್ಲ ಅಧಿಕಾರಗಳು ತಮಗೆ ಮನೆತನದವರಿಗೆ ಬೇಕು ಎನ್ನುವ ರೀತಿಯಲ್ಲಿದೆ. ಅಧಿಕಾರಗಳು ಕ್ಷೇತ್ರದ ಸಾಮಾನ್ಯ ಕರ‍್ಯಕರ್ತನಿಗೂ ಸಿಗಲಿ. .
ಈಗಾಗಲೇ ರಾಜ್ಯದಲ್ಲಿ ಬರುವ ಎಂಪಿ ಚುನಾವಣೆಯಲ್ಲಿ ಭಾಜಪ ಹಾಗೂ ಜೆಡಿಎಸ್ ಹೊಂದಾಣಿಕೆಯಾಗಿದೆ. ಮೈತ್ರಿಯಲ್ಲಿ ನಮ್ಮ ಜಿಲ್ಲೆ ಸೇರಿದ್ದಲ್ಲಿ ಗೆಲುವು ನಮ್ಮದೇ. ಬರುವ ದಿನದಲ್ಲಿ ಬಸವನಬಾಗೇವಾಡಿ, ಕೋಲ್ಹಾರ ಹಾಗೂ ನಿಡಗುಂದಿ ಭಾಗಗಳಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಹಾಗೂ ಘಟಕ ರಚನೆಯಲ್ಲಿ ತೊಡಗಿಸಿಕೊಳ್ಳುವೆ. ಕರ‍್ಯಕರ್ತರು ಒಗ್ಗಟ್ಟಾಗಿ ಪಕ್ಷದ ಸಂಘಟನೆಗೆ ಮುಂದಾಗೋಣ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಅಪ್ಸರಾ ಬೇಗಂ ಚಪ್ಪರಬಂದ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ನ್ಯಾಯವಾದಿ ಎನ್.ಎಸ್ ಪಾಟೀಲ, ಪಿಎಂ ಕಂದ್ಗಲ್, ಶಂಕರಗೌಡ ಬಿರಾದಾರ, ಅಣ್ಣುಗೌಡ ಗುಜಗೊಂಡ, ನ್ಯಾಯವಾದಿ ಎಸ್.ಎಂ ಚಿಂಚೊಳ್ಳಿ, ಪಿಎಂ ಬಶೆಟ್ಟಿ, ಅಂಕಿತಾ ವಂದಾಲ, ಶರಣು ಚೌರಿ, ಅನಂದ ನಾಲತವಾಡ, ಸುನೀಲ ಚಿಕ್ಕೊಂಡ ಸೇರಿದಂತೆ ಅನೇಕರು ಇದ್ದರು.
