ಉದಯವಾಹಿನಿ ಅಫಜಲಪುರ: ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಅವರು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳೊಂದಿಗೆ ನಡೆಸುತ್ತಿರುವ ಹೋರಾಟದ ಸಂದರ್ಭದಲ್ಲಿ ಪೊಲೀಸರು ಕುರುಬುರು ಶಾಂತಕುಮಾರ ಅವರನ್ನು ಬಂಧಿಸಿ ಹೋರಾಟದ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ ಎಂದು ರೈತಪರ ಹೋರಾಟಗಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ನಂತರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವ ರಾಜಕಾರಣಿಗಳಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಬರಗಾಲದಿಂದ ಬೆಂಡಾದ ರೈತರ ಹಿತ ರಕ್ಷಣೆ ಮಾಡದೆ ರಾಜ್ಯದ ನೀರನ್ನು ತಮಿಳುನಾಡಿಗೆ ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ನಮ್ಮ ಭಾಗದ ರೈತರ ಜೀವನಾಡಿ ಭೀಮಾ ನದಿಗೆ ನೀರಿಲ್ಲದ ಸಂದರ್ಭದಲ್ಲಿ ವರ್ಷವಿಡಿ ರೈತ ಸಂಕಷ್ಟದಲ್ಲಿದ್ದರೂ ಕೂಡ ಮಹಾರಾಷ್ಟ್ರದಿಂದ ಒಂದು ಹನಿ ನೀರು ಬಿಡಿಸುವ ಪ್ರಯತ್ನಕ್ಕೆ ನಮ್ಮ ಜಿಲ್ಲೆಯ ಮತ್ತು ರಾಜ್ಯದ ನಾಯಕರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಕೂಡಲೇ ರಾಜ್ಯದ ರೈತರನ್ನು ರಕ್ಷಿಸಬೇಕು ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು ಕರ್ತವ್ಯ ಮರೆತ ರಾಜ್ಯ ಸರ್ಕಾರ ರೈತಪರ ಹೋರಾಟಗಾರರ ಪ್ರತಿಭಟನೆಯನ್ನು ಹತ್ತಿಕುವ ಮೂಲಕ ರಾಜ್ಯದಲ್ಲಿ ಗೂಂಡಾಗಿರಿ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.ಪ್ರತಿಭಟನೆ ವೇಳೆ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಬಾರದೆಂದು ಪೊಲೀಸ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.ಈ ವೇಳೆ ಲಕ್ಷ್ಮಿಪುತ್ರ ಮನಮಿ, ಮಹಾದೇವಪ್ಪ ಶೇರಿಕಾರ್, ಭಾಗಣ್ಣ ಕುಂಬಾರ, ಸಿದ್ದು ಪೂಜಾರಿ, ಬಸವರಾಜ ಹಳ್ಳಿಮನೆ, ಮಲ್ಲನಗೌಡ ಪಾಟೀಲ್, ಪ್ರಕಾಶ ಫುಲಾರಿ, ಸಾಯಬಣ್ಣ ಪೂಜಾರಿ, ಈರಣ್ಣ ಕಲಾಲ್, ಭೀಮು ಪೂಜಾರಿ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!