ಉದಯವಾಹಿನಿ ಚಿತ್ರದುರ್ಗ: ಜನ ಸಾಮಾನ್ಯರಿಗೆ ಮೂಲಭೂತವಾದಂತಹ ಕನಿಷ್ಠ ಆರೋಗ್ಯ ಸೇವೆಗಳನ್ನು ನೀಡುವುದೇ ಪ್ರಾಥಮಿಕ ಆರೋಗ್ಯ ಸೇವೆ. ಅಂತಹ ಸೇವೆಯನ್ನು ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಜೆ.ಎನ್.ಕೋಟೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಲವಾರು ಗ್ರಾಮಗಳಲ್ಲಿ ಆರೋಗ್ಯ ಮೇಳಗಳನ್ನು ನಡೆಸುವುದರ ಮೂಲಕ ಗ್ರಾಮೀಣ ಜನರ ಆರೋಗ್ಯ ಸೇವೆಯಲ್ಲಿ ನಿರತವಾಗಿದೆ. ಆಸ್ಪತ್ರೆಗಳಿಗೆ ಓಡಾಡಲು ಬಸ್ಸು ಅಥವಾ ಇನ್ಯಾವುದೇ ವಾಹನದ ವ್ಯವಸ್ಥೆ ಇಲ್ಲದವರಿಗೆ  ಪ್ರಯೋಜನವಾಗಲೆಂದು ಈ ಆಯುಷ್ ಆರೋಗ್ಯ ಮೇಳಗಳನ್ನು ನಡೆಸಲಾಗುತ್ತಿದ್ದು ಜನರು ಹೆಚ್ಚಿನ ರೀತಿಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ” ಎಂದು ಜೆ.ಎನ್. ಕೋಟೆ ಆಯುರ್ವೇದ ಚಿತ್ಸಾಲಯದ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ನರೇನಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜೆ ಎನ್ ಕೋಟೆ ಆಯುಷ್ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಬುಧವಾರ ಆಯೋಜಿಸಿದ್ದ ಆರೋಗ್ಯ ಮೇಳ ಹಾಗೂ ಯೋಗ ತರಬೇತಿ ಕಾರ್ಯಕ್ರಮದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೊಂಡೆಕೆರೆ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ನಾಗರಾಜ್ ಆಯುಷ್ ಇಲಾಖೆಯ ಹಲವಾರು ಆರೋಗ್ಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಗ್ರಾನಸ್ಥರಿಗೆ ರೋಗಾನುಸಾರ ಯೋಗ ತರಬೇತಿ ನೀಡಿದರು.
 ಜೆ ಎನ್ ಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲೇಶಪ್ಪ ಆದ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ನರೇನಹಾಳ್ ಪಂಚಾಯತಿ ಸದಸ್ಯರಾದ ಶ್ರೀಮತಿ ಸುಲೋಚನಮ್ಮ, ನಾಗಮ್ಮ, ಚಂದ್ರಶೇಖರ್, ಶಾಲೆಯ ಮುಖ್ಯ ಶಿಕ್ಷಕ ಸುಭಾನ್, ಸಹ ಶಿಕ್ಷಕರಾದ ನರಸಿಂಹಪ್ಪ, ನೀಲಮ್ಮ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ಈ ಆರೋಗ್ಯ ಮೇಳದಲ್ಲಿ ಸುಮಾರು 120ಕ್ಕೂ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸೆ ನೀಡಿ ಉಚಿತ ಔಷಧ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!