
ಉದಯವಾಹಿನಿ ಶಿಡ್ಲಘಟ್ಟ: ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಸರ್ಕಾರಿ ಶಾಲೆಗೆ ಬರುತ್ತಾರೆ. ಅವರ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಸಲುವಾಗಿಯೇ ನಿರಂತರ ಡೆಂಟಲ್ ಶಿಬಿರಗಳು ನಡೆಸಲಾಗುತ್ತಿದೆ ಎಂದು ಸ್ನೇಹ ಹಸ್ತ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಡಾ. ಮಹೇಶ್ ವೈ ಹೇಳಿದರು.ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಕೊಂಡಪ್ಪಗಾರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ನೇಹ ಹಸ್ತ ಟ್ರಸ್ಟ್ ನಿಂದ ಶನಿವಾರ ಉಚಿತ ಡೆಂಟಲ್ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಆರೋಗ್ಯದಿಂದ ಇದ್ದರೆ ಅವರ ವಿದ್ಯಾಭ್ಯಾಸವೂ ಉತ್ತಮವಾಗಿರುತ್ತದೆ ಎಂದರು.
ಮಕ್ಕಳಿಗೆ ಹಲ್ಲು ನೋವು ಕಾಯಿಲೆ ಬಂದ ಮೇಲೆ ವೈದ್ಯರ ಬಳಿ ಹೋಗುವುದಕ್ಕಿಂತ ಮೊದಲೇ ಜಾಗೃತಿ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ದಂತ ತಪಾಸಣೆ ನಡೆಸಿ, ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ಅಲ್ಲದೇ ಉಚಿತವಾಗಿ ಹಲ್ಲು ಶುಭ್ರಗೊಳಿಸುವ ಪೇಸ್ಟ್, ಬ್ರಷ್ ವಿತರಿಸುತ್ತಿದ್ದೇವೆ. ಈಗಾಗಲೇ ಹಲವು ಶಾಲೆಗಳಲ್ಲಿ ಆರೋಗ್ಯ ಅರಿವು ಹಾಗೂ ತಪಾಸಣೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯಿನಿ ಬಿ.ರಾಜೇಶ್ವರಿ ಮಾತನಾಡಿ, ಸರ್ಕಾರಿ ಶಾಲೆಗೆ ತೀರ ಬಡ ಮಕ್ಕಳು ಬರುವುದರಿಂದ ಇಂತಹ ಶಿಬಿರಗಳು ಸರ್ಕಾರಿ ಶಾಲೆಗಳಿಗೆ ಅವಶ್ಯವಾಗಿದೆ. ಬಡಕುಟುಂಬಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಈ ರೀತಿಯ ಚಿಕಿತ್ಸೆಯನ್ನು ಕೊಡಿಸುವುದಕ್ಕೆ ಆಗುವುದಿಲ್ಲ. ಇಂತಹ ಶಿಬಿರಗಳಿಂದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು. ಡಾ. ಮಹೇಶ್ ವೈ ಅವರು ಅಂಗನವಾಡಿ ಮಕ್ಕಳಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ ದಂತ ಪರೀಕ್ಷೆ ಮಾಡಿದ ನಂತರ ಮಕ್ಕಳಿಗೆ ಯಾವರೀತಿ ಹಲ್ಲನ್ನು ಹುಜ್ಜಬೇಕು, ಯಾವ ರೀತಿ ಶುಭ್ರ ಮಾಡುವುದು ಇವೆಲ್ಲವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಎನ್ ಸುಬ್ಬರಾಮ್, ಅಂಗನವಾಡಿ ಶಿಕ್ಷಕಿ ಮಂಜುಳ, ಸ್ಥಳೀಯ ಪ್ರಮುಖರು ಹಾಗೂ ಮಕ್ಕಳ ಪಾಲಕರು ಹಾಜರಿದ್ದರು.
