
ಉದಯವಾಹಿನಿ ದೇವರಹಿಪ್ಪರಗಿ: ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಪರಿಸರ ಸ್ವಚ್ಛತೆಯಿಂದ ಡೆಂಗ್ಯೂ ಮಲೇರಿಯಾದಂತಹ ರೋಗಗಳನ್ನೂ ನಿಯಂತ್ರಿಸಲು ಸಾಧ್ಯವಿದೆ. ರೋಗಮುಕ್ತ ಸಮಾಜ ನಿರ್ಮಾಣದಲ್ಲಿ ಪಟ್ಟಣದ ಪ್ರತಿಯೊಬ್ಬರು ಕೈಜೋಡಿಸಿ ಎಂದು ಪ.ಪಂ ಮುಖ್ಯಾಧಿಕಾರಿ ಎಲ್. ಡಿ ಮುಲ್ಲಾ ಹೇಳಿದರು.ಪಟ್ಟಣದಲ್ಲಿ ಶುಕ್ರವಾರದಂದು ತಾಂಡ ಹಾಗೂ ಇಂಡಿ ರಸ್ತೆಯಲ್ಲಿ ಬೆಳೆದ ಅನಗತ್ಯ ಕಳೆ ತೆಗೆಯುವ ಕಾರ್ಯಕೈಗೊಂಡು ಮಾತನಾಡಿದ ಅವರು, ಪಟ್ಟಣದ ಸ್ವಚ್ಛತೆಗಾಗಿ ಪ್ರತಿವಾರ ಒಂದೊಂದು ಸ್ಥಳವನ್ನು ಆಯ್ಕೆಮಾಡಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಪೌರಕಾರ್ಮಿಕರು ಸಹ ತಮ್ಮ ಕರ್ತವ್ಯದ ಬಹುತೇಕ ಅವಧಿಯನ್ನು ಸ್ವಚ್ಛತೆಯಲ್ಲಿಯೇ ಕಳೆಯುತ್ತಿದ್ದಾರೆ. ಅದಾಗ್ಯೂ ಕೆಲವು ಪ್ರದೇಶಗಳು ಮಲೀನವಾಗಿ ಕಾಣುತ್ತಿವೆ. ಪಟ್ಟಣದ ಸೌಂದರ್ಯ ಹೆಚ್ಚಲು ಸ್ವಚ್ಛತೆ ಅಗತ್ಯವಾಗಿದೆ. ಅದಕ್ಕಾಗಿ ಸಾರ್ವಜನಿಕರು ಸಹ ಸ್ವಚ್ಛತೆಗಾಗಿ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಮಾತನಾಡಿ, ಪಟ್ಟಣದ ನಿವಾಸಿಗಳು ತಮ್ಮ ಮನೆಗಳ ಸುತ್ತಲೂ ನೈರ್ಮಲ್ಯ ಕಾಪಾಡಬೇಕು. ಆರೋಗ್ಯಯುತ ಜೀವನ ನಮ್ಮ ಆದ್ಯತೆಯಾಗಲಿ. ಅದಕ್ಕಾಗಿ ಪ್ರತಿ ಕುಟುಂಬಕ್ಕೆ ನೀಡಿದ ಡಬ್ಬಿಗಳಲ್ಲಿ ಒಣ ಹಾಗೂ ಹಸಿ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡುವ ಸಿಬ್ಬಂದಿಗೆ ಸಹಕರಿಸಬೇಕು ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಡಾ.ಅಂಬೇಡ್ಕರ್ ವೃತ್ತದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು ಭಾಗವಹಿಸಿ ಬಹುಮಾನ ಗೆಲ್ಲಲು ಹೆಸರು ನೋಂದಾಯಿಸಿ ಕೊಳ್ಳಲು ತಿಳಿಸಿದರು. ಇದೇ ಸಂದರ್ಭದಲ್ಲಿ ಪ ಪಂ ಸಿಬ್ಬಂದಿಗಳಾದ ಮಾರ್ತಾಂಡ ಗುಡಿಮನಿ, ಇಮಾಮ್ ಮುಲ್ಲಾ, ಮುಬಾರಕ್ ಪಡೇಕನೂರ, ಅಶೋಕ ಮಲ್ಲಾರಿ, ಶೇಖರ್ ಮರಬಿ, ರಫೀಕ್ ನದಾಫ್, ರಾಜು ಕರ್ಜಗಿ ಸೇರಿದಂತೆ ಹಲವಾರು ಜನ ಪೌರಕಾರ್ಮಿಕರು ಉಪಸ್ಥಿತರಿದ್ದರು.
