ಉದಯವಾಹಿನಿ, ಔರಾದ : ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು ಆ ಶಕ್ತಿ ಅವರಲ್ಲಿ ಇರುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಸಾಧಿಸುವ ಛಲ ಬೆಳೆಸಿಕೊಂಡಾಗ ಮಾತ್ರ ನಿಶ್ಚಿತ ಗುರಿ ಮುಟ್ಟಲು ಸಾಧ್ಯ ಎಂದು ಸಿಪಿಐ ರಘುವೀರಸಿಂಗ ಠಾಕೂರ ಹೇಳಿದರು.ಪಟ್ಟಣದ ಬಸವ ಗುರುಕುಲ ಸಮೂಚ್ಚಯದ ಶ್ರೀ ಚನ್ನಬಸವೇಶ್ವರ ಡಿಇಡಿ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಧಕನಿಗೆ ಬಡತನ ಎನ್ನುವುದು ಶಾಪವಲ್ಲ ಹಾಗೂ ಬಡತನ ಸಾಧನೆಗೆ ಅಡ್ಡಿಯಲ್ಲ. ಸವಲತ್ತು, ಸೌಲಭ್ಯಗಳಿಲ್ಲದೆ ಎಷ್ಟೋ ಜನ ಸಾಧಿಸಿರುವವರು ಇದ್ದಾರೆ. ಸಾಧಕನಿಗೆ ಸಾಧಿಸುವ ಹಠವಿರಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ ಮಾತನಾಡಿ, ಶಿಕ್ಷಕರು, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಹೊಂದಾಣಿಕೆ ಚನ್ನಾಗಿದ್ದರೆ, ಕಾಲೇಜಿನ ಫಲಿತಾಂಶ ಹೆಚ್ಚಳವಾಗುತ್ತದೆ. ವಿದ್ಯಾರ್ಥಿಗಳ ಬಳಿಯಲ್ಲಿ ಸಾಧಿಸುವ ಮನಸ್ಸಿದ್ದರೆ ಮಾರ್ಗಗಳು ತಾನಾಗಿಯೇ ದೊರೆಯುತ್ತವೆ ಎಂದರು.ಪ್ರಾಂಶುಪಾಲ ಶರಣಪ್ಪ ನೌಬಾದೆ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಸಂಸ್ಥೆಗೆ ಜೊತೆಗೆ ಹೆತ್ತ ತಂದೆ-ತಾಯಿಗೆ ಕೀರ್ತಿ ತರುವಂತೆ ಬದುಕಿ ತೋರಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ಬಸವಗುರುಕುಲ ಶಾಲೆಯ ಮುಖ್ಯಗುರು ಇಂದುಮತಿ ಎಡವೆ, ಉಪನ್ಯಾಸಕರಾದ ಸುರೇಖಾ ಮೆಂಗಾ, ಸಂಜೀವಕುಮಾರ ವಲಾಂಡೆ, ಬಸವರಾಜ ತಳವಾರ್, ರೇಖಾ ನೌಬಾದೆ, ವಾಮನರಾವ ಮಾನೆ, ಐಟಿಐ ಕಾಲೇಜಿನ ಪ್ರಾಂಶುಪಾಲ ಸತೀಶ ಗಂದಿಗುಡೆ, ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸನ್ವರ್ ಸುಲ್ತಾನ, ನಾಗನಾಥ ಶಂಕು, ಪ್ರಶಿಕ್ಷಣಾರ್ಥಿಗಳಾದ ನಾಗಜ್ಯೋತಿ, ನಿಖಿತಾ ರಾಜಕುಮಾರ, ಬಾಲಾಜಿ ವೆಂಕಟ, ನೀಲಾಂಬಿಕಾ ಅಶೋಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
