ಉದಯವಾಹಿನಿ, ಬೆಂಗಳೂರು: ಭೂಮಿ ಸಾಫ್ಟ್‍ವೇರ್ ಮಾದರಿಯಲ್ಲಿ ಗ್ರಾಮಪಂಚಾಯಿತಿಗಳು ಸ್ಥಿರಾಸ್ತಿಗಳ ದಾಖಲಾತಿಗಳನ್ನು ಸಂರಕ್ಷಿಸಿ ದುರುಪಯೋಗವನ್ನು ತಡೆಗಟ್ಟಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಸ್ವಚ್ಛ ಸರ್ವೇಕ್ಷಣ ರಾಜ್ಯಮಟ್ಟದ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲೂ ನಮ್ಮ ಸ್ವತ್ತು ಎಂಬ ವ್ಯವಸ್ಥೆಯ ಮೂಲಕ ಆಸ್ತಿ ದಾಖಲಾತಿಗಳ ದುರುಪಯೋಗವನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳು ಸ್ವಾವಲಂಬಿ ಆರ್ಥಿಕತೆಯನ್ನು ರೂಢಿಸಿಕೊಳ್ಳಬೇಕು. ತೆರಿಗೆಯನ್ನು ಹೆಚ್ಚು ವಸೂಲಿ ಮಾಡಬೇಕು. ಗ್ರಾಮ ಪಂಚಾಯಿತಿ ಸದಸ್ಯರು, ಗುತ್ತಿಗೆದಾರರು ಹಾಗೂ ಕಮಿಷನ್‍ಗೆ ಆದ್ಯತೆ ನೀಡದೆ, ಉತ್ತಮ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಶಾಶ್ವತ ಆಸ್ತಿಗಳು ನಿರ್ಮಾಣಗೊಳ್ಳುತ್ತಿವೆ, ಆರ್ಥಿಕ ಸಬಲೀಕರಣ ಹೆಚ್ಚಾಗಿದೆ, ಪ್ರತಿ ಪಂಚಾಯಿತಿಯಲ್ಲೂ ಸುಮಾರು 5 ಕೋಟಿ ರೂ.ವರೆಗೂ ಕೆಲಸಗಳಾಗುತ್ತಿವೆ. ಸ್ಥಳೀಯವಾಗಿ ಕೆಲಸಗಳನ್ನು ಮಾಡಲು ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿಯವರು ಬಾಪೂಜಿ ಸೇವಾಕೇಂದ್ರಗಳಲ್ಲಿ 44 ಸೇವೆಗಳನ್ನು ಪೂರೈಸುವುದಕ್ಕೆ ಚಾಲನೆ ನೀಡಿದರು. 800 ಪಂಚಾಯಿತಿಗಳಿಗೆ ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳನ್ನು ವಿತರಿಸಿದರು.

Leave a Reply

Your email address will not be published. Required fields are marked *

error: Content is protected !!