
ಉದಯವಾಹಿನಿ ಶಿಡ್ಲಘಟ್ಟ: ವಿಶ್ವವಿಖ್ಯಾತ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯನ್ನು185 ಕೋಟಿ ವೆಚ್ಚದಲ್ಲಿ ಮುಂದಿನ ವರ್ಷದ ವೇಳೆಗೆ ಹೈ-ಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯನ್ನಾಗಿ ನಿರ್ಮಿಸುವ ಉದ್ದೇಶವಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.ರೇಷ್ಮೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಶಿಡ್ಲಘಟ್ಟ ನಗರಕ್ಕೆ ಬೇಟಿ ನೀಡಿದ್ದು, ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯ ಹೈ-ಟೆಕ್ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು ಸರ್ವೇ ನಂ 19ರ ಸರ್ಕಾರಿ ಜಮೀನಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸುವುದು ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿತ್ತು. ಶಿಡ್ಲಘಟ್ಟ ನಗರದಲ್ಲಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು 75 ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಈ ಯೋಜನೆಗೆ ಒಟ್ಟು 185 ಕೋಟಿ ಅನುದಾನದ ಅವಶ್ಯಕತೆಯಿದ್ದು, ಪ್ರಸ್ತುತ ಮೊದಲನೇ ಹಂತದಲ್ಲಿ 10 ಎಕರೆ ಜಮೀನಿನಲ್ಲಿ 80 ಕೋಟಿ ರೂಗಳ ರೇಷ್ಮೆ ಮಾರುಕಟ್ಟೆ ಕಾಮಗಾರಿಯನ್ನು ಪ್ರಾರಂಭ ಆಗಲಿದೆ. ಮುಂದಿನ ವರ್ಷದಲ್ಲಿ ಉಳಿಕೆ ಅನುದಾನವನ್ನು ಒದಗಿಸಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.ಡಾ.ಎಂಸಿ ಸುಧಾಕರ್,ಜಿಲ್ಲಾ ಉಸ್ತುವಾರಿ ಸಚಿವ ಮಾತನಾಡಿ,ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಮಾಡಲು ಸ್ಥಳ ಪರಿಶೀಲಿಸಲು ನಾನು ಈ ಹಿಂದೆ ಭೇಟಿ ನೀಡಿದಾಗ ಸ್ಥಳದಲ್ಲಿ ಗೊಂದಲಗಳಿದ್ದು ಅದನ್ನ ಸಂಪೂರ್ಣವಾಗಿ ಬಗೆಹರಿಸಿಕೊಡಿ ನಂತರ ನಾವು ಒಂದು ಸುಸಜ್ಜಿತವಾದ ಹೈ-ಟೆಕ್ ರೇಷ್ಮೆ ಮಾರುಕಟ್ಟೆಯನ್ನು ನಿರ್ಮಿಸೋಣ ಎಂದು ತಹಶೀಲ್ದಾರ್ ಹಾಗೂ ಕ್ಷೇತ್ರದ ಶಾಸಕ ಬಿಎನ್ ರವಿಕುಮಾರ್ ಅವರಿಗೆ ಮನವಿ ಮಾಡಿದ್ದೆ. ಅದೇ ರೀತಿ ಇಂದು ಸ್ಥಳ ಪರಿಶೀಲಿಸಲು ಬಂದಾಗ ಇದು ಸಂಪೂರ್ಣವಾಗಿ ಯಾವುದೇ ಗೊಂದಲಗಳಿಲ್ಲದೆ ಜಾಗವನ್ನು ಅಚ್ಚುಕಟ್ಟಾಗಿ ಬಂದೋಬಸ್ತ್ ಮಾಡಿದ್ದಾರೆ. ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು ಸಹಕಾರ ನೀಡಿದ ರೈತರಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ. ಶಾಸಕರ ಪರಿಶ್ರಮದಿಂದ ಈ ಜಾಗ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆಗೆ ಸೂಕ್ತವಾಗಿದೆ ಎಂದು ಶಾಸಕ ಬಿಎನ್ ರವಿಕುಮಾರ್ ಅವರನ್ನು ಪ್ರಶಂಸಿಸಿದರು.
ಈ ಭಾಗದ ರೈತರು ನನ್ನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾನು ಕೇಳಿದ ತಕ್ಷಣ ರೈತರು ಸ್ಥಳವನ್ನು ಹೈ-ಟೆಕ್ ರೇಷ್ಮೆ ಮಾರುಕಟ್ಟೆಗೆ ಬಿಟ್ಟು ಕೊಟ್ಟಿದ್ದಾರೆ. ಸ್ಥಳ ಪರಿಶೀಲಿಸಲು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶಣ್ಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಸಿ ಸುಧಾಕರ್ ಅವರು ಸ್ಥಳ ಪರಿಶೀಲಿಸಿದರು. ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಮುಂದಾಗಿರುವ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. -ಬಿ.ಎನ್ ರವಿಕುಮಾರ್, ಶಾಸಕರು ಶಿಡ್ಲಘಟ್ಟ.
