
ಉದಯವಾಹಿನಿ ತಾಳಿಕೋಟೆ: ತಾಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಹೊಂದಿದ ತಾಲೂಕಾಗಿ ಮಾರ್ಪಾಡು ಮಾಡಲು ಎಲ್ಲಾ ಇಲಾಖೆ ಅಧಿಕಾರಿಗಳು ಒಂದುಗೂಡಿ ಸರ್ಕಾರದಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢ ತಾಲೂಕಾಗಿ ಮಾರ್ಪಾಡು ಮಾಡೋಣ. ಮುಂದಿನ ಎರಡು ವರ್ಷಗಳಲ್ಲಿ ಮುಂದುವರೆದ ತಾಲೂಕಾಗಿ ಮಾಡಿ ತೋರಿಸೋಣ ಎಂದು ಬಿ ಆರ ಬಿರಾದಾರ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂಕಲ್ಪ ಸಪ್ತಾಹದ ಕೃಷಿ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ ಡಿ ಬಾವಿಕಟ್ಟಿ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮಾತನಾಡಿ ರೈತರು ತಮ್ಮ ಭೂಮಿಯ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಭೂಮಿಗೆ ಅನುಗುಣವಾಗಿ ರಸ ಗೊಬ್ಬರಗಳನ್ನು ಸಿಂಪಡಿಸುವುದರಿಂದ ಫಲವತ್ತಾದ ಬೆಳೆಗಳನ್ನು ಬೆಳೆಯಲು ಅನುಕೂಲಕರವಾಗುವದು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಲ್ಲಿ ಕೇಂದ್ರ ಸರ್ಕಾರ ರೈತರಿಗೆ 6000 ನೀಡುತ್ತದೆ. ಈ ಯೋಜನೆಯಲ್ಲಿ 14 ಪಂಚಾಯಿತಿಗಳ ಮೂರು ಸಾವಿರ ರೈತರು ಬ್ಯಾಂಕಿಗೆ ಹೋಗಿ ಈ ಕೆವೈಸಿ ಈ ಕೆವೈಸಿ ಮಾಡಿಸಿ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಇಲಾಖೆಯಲ್ಲಿ ರೈತರಿಗೆ ಬಿತ್ತುವ ಬೀಜಗಳನ್ನು ನೀಡಿ ಸಹಕರಿಸುತ್ತೇವೆ. ಎಲ್ಲರ ಸಹಕಾರದೊಂದಿಗೆ 2025ಕ್ಕೆ ತಾಲೂಕನ್ನು ಮುಂದುವರೆದ ತಾಲೂಕಾಗಿ ಮಾರ್ಪಾಡು ಮಾಡೋಣ ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ದೇಶಪಾಂಡೆ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆಯಾದ ರಾಷ್ಟ್ರೀಯ ತೋಟಗಾರಿಕಾ ಮಿಷನ ಯೋಜನೆಯಲ್ಲಿ ದ್ರಾಕ್ಷಿ ದಾಳಿಂಬೆ ಲಿಂಬೆ ಅಂಜೂರಾ ಮಾವು ಹಲವಾರು ಬೆಳೆಗಳನ್ನು ನಾಟಿ ಮಾಡಿದರೆ ಸಹಾಯಧನ ನೀಡುತ್ತದೆ. ದ್ರಾಕ್ಷಿ ಬೆಳೆಗಾರರು ಹಾಗೂ ತರಕಾರಿ ಬೆಳೆದವರಿಗೆ ಪ್ಲಾಸ್ಟಿಕ್ ಟ್ರೇ ನೀಡಲಾಗುವುದು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2 ಎಕರೆಯಲ್ಲಿ ಯಾವುದೇ ರೀತಿ ಹಣ್ಣುಗಳನ್ನು ಬೆಳೆದರೂ ಸಹಾಯಧನ ನೀಡಲಾಗುವುದೆಂದು ತಿಳಿಸಿದರು.
ಈ ಸಮಯದಲ್ಲಿ ಬಿ ವಾಯ ಬಿರಾದಾರ ಉಪ ನಿರ್ದೇಶಕರು ರೇಷ್ಮೆ ಇಲಾಖೆ, ಪ್ರಕಾಶ ಭಜಂತ್ರಿ ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ, ಮಹೇಶ ಜೋಶಿ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.
