
ಉದಯವಾಹಿನಿ ಮಾಲೂರು:– ತಾಲ್ಲೂಕಿನ ಕಸಬಾ ಹೋಬಳಿ ಅರಳೇರಿ ಗ್ರಾಮಪಂಚಾಯತಿಯ ನೀಲಕಂಠ ಅಗ್ರಹಾರದ ಪ್ರಗತಿಪರ ರೈತ ಶ್ಯಾಮಣ್ಣ ಅವರು ಚಿನ್ನದನಾಡಿನಲ್ಲಿ ಅಪರೂಪದ ಬಿಳಿರಾಗಿಯನ್ನು ಸಮೃದ್ಧವಾಗಿ ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಚಿಂತಾಮಣಿಯ ಕೃಷಿ ಇಲಾಖೆ ಅಧಿಕಾರಿ ನಾರಾಯಣರೆಡ್ಡಿ ಅವರು ಗ್ರೇಡಿಂಗ್ ಮಾಡಿದ 350 ಗ್ರಾಂ ಬಿತ್ತನೆರಾಗಿಯನ್ನು ಖರೀದಿಸಿ ಎಮ್ಮೆಗೊಬ್ಬರ ಬಳಕೆ ಮಾಡಿ ಸಾಂಪ್ರದಾಯಿಕವಾಗಿ ಬಿತ್ತನೆ ಮಾಡಲಾಗಿದ್ದು, 21 ದಿನಕ್ಕೆಲ್ಲಾ ಒಂದೂವರೆ ಅಡಿ ಎತ್ತರಕ್ಕೆ ಪೈರು ಬೆಳೆದಿದೆ. ನಂತರದಲ್ಲಿ 3 ತಿಂಗಳಿಗೆ 5 ಅಡಿ ಎತ್ತರದ ಪೈರು ಇದೀಗ ನಳನಳಿಸುತ್ತಿದ್ದು, ಸಮೃದ್ಧ ತೆನೆ ಕಟಾವಿಗೆ ಬಂದಿವೆ. ಸಾವಯವ ರಾಗಿ ಬೆಳೆ ರೋಗ ನಿರೋಧಕ ಶಕ್ತಿ ಹೊಂದಿದ್ದು, ಬೇಕರಿ ತಿಂಡಿ, ಮಕ್ಕಳ ಪೌಷ್ಠಿಕಾಂಶದ ಸರಿ ಮಾಡಲು ಬಳಕೆ ಆಗುತ್ತದೆ. ಬಿಪಿ ಮತ್ತು ಶುಗರ್ ಇರುವವರಿಗೆ ಸಮಸ್ಯೆಯನ್ನು ಹತೋಟಿಯಲ್ಲಿಡಲು ಬಿಳಿರಾಗಿ ಪೂರಕ ಎಂಬ ನಂಬಿಕೆ. 7 ನಾಟಿಹಸುಗಳನ್ನು ಸಾಕಿದ್ದು, ಇವುಗಳ ಗೊಬ್ಬರವನ್ನು ಹಾಕುವುದರಿಂದ ಇಡೀ ತೋಟ ಸಾವಯವ ಆಗಿದೆ. ಹೀಗಾಗಿ ಮನುಷ್ಯನಿಗೆ ಯಾವುದೇ ರೋಗರುಜಿನದ ಮಾತೇ ಇಲ್ಲ. ಶ್ಯಾಮಣ್ಣ ಬಿಳಿರಾಗಿ ಬೆಳೆಯನ್ನು ಮಾದರಿಯಾಗಿಟ್ಟುಕೊಂಡು ಚಿನ್ನದನಾಡಿನಲ್ಲಿ ಹೊಸತಳಿಯನ್ನು ವಿಸ್ತರಿಸಲು ರೈತರಿಗೆ ಉಚಿತವಾಗಿ ಬಿತ್ತನೆ ರಾಗಿಯನ್ನು ನೀಡುವುದಾಗಿ ರೈತ ಶ್ಯಾಮಣ್ಣ ಹೇಳಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಹೆಚ್ಚು ನೀರಾವರಿ ಪ್ರದೇಶದ ಹೊಂದಿರುವ ಭೂಮಿಯಲ್ಲಿ ಬಿಳಿ ರಾಗಿಯನ್ನು ಬೆಳೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಬಿಳಿ ರಾಗಿಯನ್ನು ಯತ್ತೇಚ್ಚವಾಗಿ ಬೆಳೆಯುತ್ತಾರೆ ನಮ್ಮ ಜಿಲ್ಲೆಯಲ್ಲಿ ಬೆಳೆಯನ್ನು ಬೆಳೆಯುತ್ತಿದ್ದು ತಳಿ ಸಿಗುವುದು ಸ್ವಲ್ಪ ಕಷ್ಟವಾದರು ರೈತರು ಬೆಳೆದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಇನ್ನೂ ಬಿಳಿ ರಾಗಿ ತಿಂಡಿ ತಿನಿಸುಗಳಗೆ ಬಹು ಬೇಡಿಕೆ ಹೊಂದಿದೆ. ಆರೋಗ್ಯಕರವಾದ ಈ ಬಿಳಿ ರಾಗಿ ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಕಾಯಿಲೆಗೆ ರಾಮ ಬಾಣವಾಗಿದೆ ಎಂದು ಹೇಳಿದರು.
