ಉದಯವಾಹಿನಿ ದೇವರಹಿಪ್ಪರಗಿ: ಪಂಪಸೆಟ್ ಗಳಿಗೆ ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ತಾಲೂಕಿನ ಕೋರವಾರ ಹೆಸ್ಕಾಂ ಕಚೇರಿ ಎದುರು ಮಂಗಳವಾರದಂದು ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನಾದ್ಯಂತ ಬರ ಆವರಿಸಿರುವ ಹಿನ್ನೆಲೆಯಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಮತ್ತೋಂದೆಡೆ ಭಾವಿ ಮತ್ತು ಕೊಳವೆ ಭಾವಿಗಳಿಗೆ ಕೆಲವು ಕಡೆಗಳಲ್ಲಿ ನೀರಿದ್ದರೂ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರ ಸಂಕಷ್ಟಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.  ದಿನಕ್ಕೆ ಕೇವಲ 2-3 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಅದೂ ಕೂಡ ಮಧ್ಯೆ ಕಡಿತವಾಗುತ್ತಿದೆ.  ಸರಕಾರ ಹಗಲು ಹೊತ್ತು ಮೂರ್ನಾಲ್ಕು ಗಂಟೆ ಮತ್ತು ರಾತ್ರಿ ವೇಳೆ ಮೂರು ಗಂಟೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು.  ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೆಸ್ಕಾಂ ಕಚೇರಿಗೆ ಕೀಲಿ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಇಂಡಿ ಹೆಸ್ಕಾಂ ಇಇ ಎಸ್.ಎ. ಬಿರಾದಾರ ರೈತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಇನ್ನು ಮುಂದೆ ಹಗಲು ಹೊತ್ತಿನಲ್ಲಿ 3 ಗಂಟೆ ತ್ರಿೃಫೇಸ್ ಮತ್ತು ರಾತ್ರಿ ವೇಳೆ ಮೂರು ಗಂಟೆ ತ್ರಿ-ಫೇಸ್ ಹಾಗೂ ರಾತ್ರಿ 7 ರಿಂದ 9 ಗಂಟೆಯವರೆಗೆ ಸಿಂಗಲ್ ಪೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ದೇವರಹಿಪ್ಪರಗಿ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಸಿಂದಗಿ ಎಇಇ ಚಂದ್ರಕಾಂತ ನಾಯಕ, ಸಿಬ್ಬಂದಿಗಳಾದ ಐ.ಜಿ.ಸಿರಾಳಶೆಟ್ಟಿ, ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಗ್ರಾಮದ ಪ್ರಮುಖರು, ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!