ಉದಯವಾಹಿನಿ, ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಟೀಂ ಇಂಡಿಯಾ ಆಲ್‌ರೌಂಡರ್ ಶಿವಂ ದುಬೆ ತಮ್ಮ ಪತ್ನಿ ಹಾಗೂ ಸ್ನೇಹಿತರೊಟ್ಟಿಗೆ ಅಹಮದಾಬಾದ್‌ನಿಂದ ಮುಂಬೈಗೆ ರೈಲಿನ ಮೂಲಕ ಪ್ರಯಾಣ ಬೆಳಸಿದ ವಿಚಾರ ಬೆಳಕಿಗೆ ಬಂದಿದೆ.
ಶಿವಂ ದುಬೆ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಒಬ್ಬರು. ಅವರು ವಿಶ್ವದ ನಂ.1 ಟಿ20ಐ ತಂಡಕ್ಕಾಗಿ ಎಲ್ಲಾ ಒಂಬತ್ತು ಪಂದ್ಯಗಳನ್ನು ಆಡಿದರು. ಐದು ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ 235 ರನ್ ಗಳಿಸಿದರು. ಮಾ.8 ರ ಭಾನುವಾರ ಅಹಮದಾಬಾದ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಫೈನಲ್ ಪದ್ಯಂದಲ್ಲಿ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಗಳಿಸಿದರು. ಆ 26 ರನ್‌ಗಳಲ್ಲಿ ಅವರು 20 ನೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭಾರತದ ಒಟ್ಟು ಮೊತ್ತಕ್ಕೆ 24 ರನ್‌ಗಳನ್ನು ಸೇರಿಸಿದರು. ಭಾರತ ದಾಖಲೆಯ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲಲು ದೊಡ್ಡ ಪಾತ್ರ ವಹಿಸಿದರು.
ಅಹಮದಾಬಾದ್‌ನಿಂದ ಮುಂಬೈಗೆ ಹೋಗುವ ಎಲ್ಲಾ ವಿಮಾನಗಳು ಬುಕ್ ಆಗಿದ್ದರಿಂದ ಶಿವಂ ದುಬೆ ರೈಲಿನ ಮೂಲಕ ಪ್ರಯಾಣಿಸಲು ನಿರ್ಧರಿಸಿದರು. ರೈಲಿನಲ್ಲಿ ಪ್ರಯಾಣಿಸಿದರೆ ಅಭಿಮಾನಿಗಳಿಂದ ಕಿರಿಕಿರಿ ಅನುಭವಿಸಬಹುದು ಎನ್ನಲಾಗಿತ್ತು. ಆದರೆ, ಅವರು ಮುಂಬೈನಲ್ಲಿ ಮನೆಯಲ್ಲಿದ್ದ ತಮ್ಮ ನಾಲ್ಕು ವರ್ಷದ ಮಗ ಅಯಾನ್ ಮತ್ತು ಎರಡು ವರ್ಷದ ಮಗಳು ಮೆಹ್ವಿಶ್ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದರು. ಹೀಗಾಗಿ, ಯಾವುದೇ ತೊಂದರೆಯನ್ನು ಸ್ವೀಕರಿಸಲು ನಿರ್ಧರಿಸಿ, ಕೊನೆಗೆ ರೈಲಿನಲ್ಲೇ ಪ್ರಯಾಣಿಸಿದರು.
