
ಉದಯವಾಹಿನಿ ಮಾಲೂರು:- ಪಟ್ಟಣದ ರಿಯಲ್ ಎಸ್ಟೇಟ್ ಉದ್ಯಮೆ ದಾರ ಹಾಗೂ ಜೆಸಿಬಿ ಮಾಲಿಕ ಮುನಿಯಪ್ಪ (48) ಅವರನ್ನು ಸೋಮವಾರ ಸಂಜೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ತಲೆಮರಸಿಕೊಂಡಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಅವರ ಕುಟುಂಬದವರು ಪೊಲೀಸ್ ಠಾಣೆ ಮುಂಬಾಗದ ರಸ್ತೆಯಲ್ಲಿ ಮೃತ ಮುನಿಯಪ್ಪನವರ ಶವ ತಂದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ಮಾಲೂರು ಪಟ್ಟಣದ ಅರಲೇರಿ ರಸ್ತೆ ಬಳಿ ಇರುವ ವೈಟ್ ಗಾರ್ಡನ್ ಬಡಾವಣೆಯ ಶ್ರೀರಂಗ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆದಾರ ಹಾಗೂ ಜೆಸಿಬಿ ಮಾಲೀಕ ಮುನಿಯಪ್ಪ (48) ಅವರನ್ನು ಸೋಮವಾರ ಸಂಜೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಯ ತಂದೆ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಪಿಗಳಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕೊಲೆ ಆರೋಪಿಯನ್ನು ತಮಗೆ ಒಪ್ಪಿಸುವಂತೆ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರೆ ಆರೋಪಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಠಾಣೆ ಮುಂಬಾಗದ ಗೇಟ್ ಬಳಿ ಕೊಲೆಯಾದ ಮುನಿಯಪ್ಪನವರ ಶವವಿಡಲು ಬಂದಾಗ ಪೊಲೀಸರು ಮತ್ತು ಮೃತ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ. ನಡೆದು ಕುಟುಂಬಸ್ಥರಿಂದ ಹೈಡ್ರಾಮವೇ ನಡೆಯಿತು. ಸಮುದಾಯದ ಮುಖಂಡರು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅವರು ಕುಟುಂಬಸ್ಥರ ಬಳಿ ಆಗಮಿಸಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಸುಖಾಂತ್ಯಗೊಳಿಸಿದರು.
