
ಉದಯವಾಹಿನಿ ಪಾವಗಡ: ಪಡಿತರ ಚೀಟಿ ತಿದ್ದುಪಡಿ, ಸೇರ್ಪಡೆಗೆ ಆಹಾರ ಇಲಾಖೆ ಆನ್ ಲೈನ್ ನಲ್ಲಿ ಕೇವಲ ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳು ಬೆಳಿಗ್ಗೆ 7 ಗಂಟೆಯಿ೦ದ ಸಂಜೆ 7 ಗಂಟೆಯವರೆಗೆ ಊಟ, ನೀರು ಸೇವಿಸದೆ ಸೇವಾ ಕೇಂದ್ರದ ಬಾಗಿಲಲ್ಲಿ ಸರದಿ ಸಾಲಿನಲ್ಲಿ ನಿಂತು ಸುಸ್ತಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ೩ ದಿನಗಳು ಮಾತ್ರ ರಾಜ್ಯ ಸರ್ಕಾರ ತಿದ್ದುಪಡಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಿದ್ದುಪಡಿಗೆ ಮುಂದಾಗುತ್ತಿದ್ದು ದಿನವೊಂದಕ್ಕೆ 1-2 ಅರ್ಜಿಗಳು ಮಾತ್ರ ಸಲ್ಲಿಕೆಯಾಗುತ್ತಿವೆ. ಇದರಿಂದ ಮಹಿಳೆಯರು ಬೇಸತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಕಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿರುವ ಸರ್ಕಾರದ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿ0ದ ಅರ್ಹ ಪಲಾನುಭವಿಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವAತಾಗಿದೆ. ರಾಜ್ಯ ಸರ್ಕಾರ “ಗೃಹಲಕ್ಷ್ಮಿ” ಯೋಜನೆ ಜಾರಿಗೊಳಿಸಿ ಮನೆಯ ಯಜಮಾನಿಗೆ ಮಾಹೆಯಾನ ೨ ಸಾವಿರ ಘೋಷಿಸಿರುವುದರಿಂದ ಯೋಜನೆಯ ಲಾಭ ಪಡೆದುಕೊಳ್ಳಲು ಗೃಹಿಣಿಯರು ಯಜಮಾನಿಯಾಗಲು ಮುಂದಾಗಿ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೈಯಲ್ಲಿಡಿದುಕೊಂಡು ಸೇವಾಕೇಂದ್ರ ಬಾಗಿಲು ತಟ್ಟುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಸರ್ವರ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಾಗಿದೆ.
