ಉದಯವಾಹಿನಿ, ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ಪುತ್ರಿ ಸೈಮಾ ವಝೇದ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹುದ್ದೆಗೆ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಬೆನ್ನಲ್ಲೇ, ಪ್ರಾದೇಶಿಕ ನಿರ್ದೇಶಕರ ಚುನಾವಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಮೇಲುಸ್ತುವಾರಿ ಅಗತ್ಯ ಎಂದು ವಿಶ್ವದ ೬೦ಕ್ಕೂ ಹೆಚ್ಚು ವೈದ್ಯರು ಡಬ್ಲ್ಯುಎಚ್‌ಓಗೆ ಪತ್ರ ಬರೆದಿದ್ದಾರೆ.
ವಿವಿಧ ಪ್ರಾದೇಶಿಕ ಕಚೇರಿಗಳಿಗೆ ಪ್ರಸ್ತುತ ನಡೆಯುತ್ತಿರುವ ಚುನಾವಣೆಯನ್ನು ನೇರವಾಗಿ ಉಲ್ಲೇಖಿಸಿಲ್ಲವಾದರೂ, ಆಗ್ನೇಯ ಏಷ್ಯಾ ಪ್ರದೇಶದ ನಿರ್ದೇಶಕ ಹುದ್ದೆಗೆ ಸಲ್ಮಾ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಈ ಆಗ್ರಹ ಕೇಳಿಬಂದಿದೆ. ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ಅರ್ಹತೆಯನ್ನು ದೃಢಪಡಿಸುವ ಅಗತ್ಯತೆ ಇದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
ಆಗ್ನೇಯ ಏಷ್ಯಾ ನಿದೇರ್ಶಕರಾಗಿರುವ ಪೂನಮ್ ಕ್ಷೇತ್ರಪಾಲ್ ಸಿಂಗ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಹುದ್ದೆಗೆ ಸೈಮಾ ವಜೇದ್ ಹಾಗೂ ನೇಪಾಳದ ಡಾ.ಶಂಭು ಪ್ರಸಾದ್ ಆಚಾರ್ಯ ಸ್ಪರ್ಧೆಯಲ್ಲಿದ್ದಾರೆ. ಆಚಾರ್ಯ ಕಳೆದ ೩೦ ವರ್ಷಗಳಿಂದ ವಿಶ್ವ ಆರೋಗ್ಯ ಸಂಸ್ಥೆ ಜತೆಯಲ್ಲಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.
ಸೈಮಾ ವಜೇದ್ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಆಟಿಸಂನಲ್ಲಿ ವಿಶೇಷ ಪರಿಣತಿ ಹೊಂದಿದವರು. ಬಂಗಬಂಧು ಶೇಕ್ ಮುಜೀಬ್ ಮೆಡಿಕಲ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಅವರ ಹೆಸರಿನ ಜತೆಗೆ ಡಾಕ್ಟರ್ ಪದ ಸೇರಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!