ಉದಯವಾಹಿನಿ, ಮುಂಬೈ : ತಮ್ಮ ಸೌಂದರ್ಯ ಮತ್ತು ಪ್ರತಿಭೆಯಿಂದ ಬಾಲಿವುಡ್‌ನ ‘ಡ್ರೀಮ್ ಗರ್ಲ್’ ಎಂದೂ ಕರೆಯಲ್ಪಡುವ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಇಂದು ತಮ್ಮ ೭೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ನಟನೆ ಮತ್ತು ಸೌಂದರ್ಯದ ಮಾಂತ್ರಿಕತೆಯನ್ನು ಚಿತ್ರ ಪರದೆಯ ಮೇಲೆ ಪಸರಿಸಿದ ಹೇಮಾ ತಮ್ಮ ಕಾಲದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿ ಸಾಕಷ್ಟು ಪ್ರಶಂಸೆಯನ್ನು ಪಡೆದರು. ಅಪ್ರತಿಮ ಸೌಂದರ್ಯ ರಾಶಿಯ ಒಡತಿ ಲಕ್ಷಾಂತರ ಯುವಕರ ಕನಸಿನ ಕನ್ಯೆ ಆಗಿದ್ದು ಇತಿಹಾಸ.
೭೫ರ ಇಳಿವಯಸ್ಸಿನಲ್ಲೂ ತಮ್ಮ ಗ್ಲಾಮರ್ ಕಾಯ್ದುಕೊಂಡಿದ್ದಾರೆ.
ಹೇಮಾ ಮಾಲಿನಿ ೧೬ ಅಕ್ಟೋಬರ್ ೧೯೪೮ ರಂದು ತಮಿಳುನಾಡಿನ ಅಮ್ಮನ್ಕುಂಡಿಯಲ್ಲಿ ಜನಿಸಿದರು, ಆದರೆ ಅವರ ಪೂರ್ಣ ಹೆಸರು ಹೇಮಾ ಮಾಲಿನಿ ಚಕ್ರವರ್ತಿ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಚೆನ್ನೈನ ಆಂಧ್ರ ಮಹಿಳಾ ಸಭಾದಲ್ಲಿ ಮಾಡಿದರು. ಇದಾದ ನಂತರ ಓದಲು ದೆಹಲಿಗೆ ಬಂದು ತಮಿಳು ಎಜುಕೇಶನ್ ಅಸೋಸಿಯೇಷನ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶ ಪಡೆದಳು. ಶಾಸ್ತ್ರೀಯ ನೃತ್ಯಗಾರ್ತಿ, ನಟಿಯಾಗಬೇಕು ಎಂಬುದು ಹೇಮಾ ಮಾಲಿನಿ ಅವರ ತಾಯಿಯ ಕನಸಾಗಿತ್ತು. ಇದಕ್ಕಾಗಿ ತಾಯಿ ಮಗಳಿಗಾಗಿ ತುಂಬಾ ಕಷ್ಟಪಟ್ಟಿದ್ದರು. ಹೇಮಾ ಅವರ ತಂದೆ ವಿಎಸ್ ಆರ್ ಚಕ್ರವರ್ತಿ ತಮಿಳು ಚಿತ್ರಗಳ ನಿರ್ಮಾಪಕರಾಗಿದ್ದರು. ಇದೇ ಕಾರಣಕ್ಕೆ ಹೇಮಾಗೆ ನಟನೆಯತ್ತ ಒಲವು ಮೂಡಿತ್ತು. ನಂತರ ೧೯೬೧ ರಲ್ಲಿ, ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ಹೇಮಾ ಮಾಲಿನಿ ಅವರು ಚಲನಚಿತ್ರದಲ್ಲಿ ನೃತ್ಯಗಾರ್ತಿಯ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಪಡೆದರು.
