ಉದಯವಾಹಿನಿ, ಟೆಲ್ ಅವೀವ್: ಹಮಾಸ್ ಸೋಲಿಸಲು ಜಗತ್ತು ಒಗ್ಗೂಡುವ ಅಗತ್ಯವಿದ್ದು, ಇದು ನಿಮ್ಮೆಲ್ಲರ ಯುದ್ದವೂ ಆಗಿದೆ. ಹಮಾಸ್ ಮತ್ತು ನಾಝಿಗಳ ಮಧ್ಯೆ ವ್ಯತ್ಯಾಸವಿಲ್ಲ. ಉತ್ತರ ಇಸ್ರೇಲ್‌ನಲ್ಲಿ ನಮ್ಮನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಮತ್ತು ಹಿಜ್ಬುಲ್ಲಾಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಈ ನಡುವೆ ನಾಳೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್‌ಗೆ ಭೇಟಿ ನೀಡಿ, ಪ್ರಧಾನಿ ಬೆಂಜಮಿನ್ ನೆತ್ಯಾನ್ಯಾಹು ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು ಅತ್ತ ಗಾಜಾ ಪಟ್ಟಿಗೆ ಮಾನವೀಯ ನೆರವು ನೀಡುವ ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗಿದ್ದು, ಸಹಜವಾಗಿಯೇ ಯುದ್ದದ ಗಾತ್ರ ಮತ್ತಷ್ಟು ವಿಸ್ತರಣೆಯಾಗುವ ಭೀತಿ ಮೂಡಿದೆ.
ಇಸ್ರೇಲ್ ಸಂಸತ್ತಿನಲ್ಲಿ ಅವರು ಈ ಬಗ್ಗೆ ಮಾತನಾಡಿದ ಅವರು. ಸದ್ಯ ಎಲ್ಲರ ಚಿತ್ತ ಗಾಜಾ ಹಾಗೂ ಈಜಿಪ್ಟ್ ನಡುವಿನ ಗಡಿ ಪ್ರದೇಶದತ್ತ ನೆಟ್ಟಿದೆ. ಇಲ್ಲಿನ ರಾಫಾ ಕ್ರಾಸಿಂಗ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ಸಾಮಗ್ರಿಗಳನ್ನು ಹೊತ್ತು ಲಾರಿಗಳು ಹಲವು ದಿನಗಳಿಂದ ನಿಂತುಕೊಂಡಿದೆ. ಈ ನಡುವೆ ಹಲವು ಮಂದಿ ಕದನ ವಿರಾಮಕ್ಕಾಗಿ ಆಗ್ರಹಿಸುತ್ತಿದ್ದರೂ ಇಸ್ರೇಲ್ ಮಾತ್ರ ಸಂಪೂರ್ಣ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಮುಖ್ಯವಾಗಿ ರಾಫಾ ಕ್ರಾಸಿಂಗ್‌ನಲ್ಲಿ ಈಜಿಪ್ಟ್ ಪರಿಣಾಮಕಾರಿ ಕ್ರಮ ತೆಗೆದುಕೊಂಡಿದ್ದರೂ ಗಾಜಾ ಕಡೆಯಿಂದ ಇದು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಜಿಪ್ಟ್ ವಿದೇಶಾಂಗ ಸಚಿವ ಸಮೇಹ್ ಶೌಕ್ರಿ, ಗಾಜಾ ಕಡೆಯ ಗಡಿ ತೆರೆಯಲು ಇಸ್ರೇಲ್ ಯಾವುದೇ ಧನಾತ್ಮಕ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಯುದ್ದ ಆರಂಭವಾದಂದಿನಿಂದ ಇಲ್ಲಿಯ ವರೆಗೆ ಸುಮಾರು ೨೮೦೦ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದರೆ ೧೦,೦೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾದಲ್ಲಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿವೆ. ಆಸ್ಪತ್ರೆಗಳಲ್ಲಿ ನೀರಿನ ಕೊರತೆ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸುಮಾರು ೬ ಲಕ್ಷ ಜನರನ್ನು ಗಾಜಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಳಿಸಲಾಗಿದೆ.
