ಉದಯವಾಹಿನಿ, ಹರಪನಹಳ್ಳಿ: ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಪುಣ್ಯವಂತರಾಗಿದ್ದು, ವಿವಿಧತೆಯಲ್ಲಿ ಏಕತೆ ಸಾರುವುದೇ ಈ ನೆಲದ ಗುಣವಾಗಿದೆ ಎಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಅಭಿಪ್ರಾಯಪಟ್ಟರು. ತಾಲೂಕಿನ ಕುಂಚೂರು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಹಾಗೂ ನೆಹರು ಯುವ ಕೇಂದ್ರ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮದ ನಿಮಿತ್ತ ಮಣ್ಣು ಸಂಗ್ರಹ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಈ ದೇಶದಲ್ಲಿರುವ ಪ್ರತೀ ರಾಜ್ಯದ ಭಾಷೆ, ಜೀವನ ಶೈಲಿ ಸೇರಿ ವಿವಿಧತೆ ಇದೆ. ಆದರೆ, ದೇಶದ ಕುರಿತು ಇರುವ ಭಾವನೆ ಮಾತ್ರ ಒಂದೇ ಆಗಿದ್ದು, ಹೀಗಾಗಿ ಈ ನೆಲದ ಸೇವೆಗೆ ಎಲ್ಲರೂ ಸಿದ್ಧ ಇರಬೇಕು. ಕೇಂದ್ರದ ಮಂತ್ರಾಲಯದ ಆದೇಶದಂತೆ ತಾಲೂಕಿನ ಎಲ್ಲಡೆ ಆ.15ರಂದು ವೀರ ಯೋಧರಿಗೆ ಗೌರವ ಸಲ್ಲಿಸಲು ಶಿಲಾಫಲಕ ನಿರ್ಮಾಣ, ನಿವೃತ್ತ ಯೋಧರಿಗೆ ಸನ್ಮಾನ, ಅಮೃತ ಸರೋವರದ ಕಟ್ಟೆ ಮೇಲೆ ಧ್ವಜಾರೋಹಣ, ಅಮೃತವಟಿಕ, ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮದ ನಿಮಿತ್ತ ಪ್ರತೀ ಗ್ರಾಪಂನಿಂದ ಮಣ್ಣು ಸಂಗ್ರಹಿಸುವುದು ಸೇರಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ತಾಲೂಕಿನೆಲ್ಲಡೆ ಸಂಗ್ರಹಿಸಿದ ಮಣ್ಣನ್ನು ತಾಲೂಕು ಮಟ್ಟದ ಕಾರ್ಯಕ್ರಮದ ಮೂಲಕ ನೆಹರು ಯುವ ಕೇಂದ್ರದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ಮಾತನಾಡಿ, ದೇಶದ ಮೇಲಿನ ಭಕ್ತಿ ಜತೆಗೆ ಪ್ರೀತಿಯೂ ಮುಖ್ಯವಾಗಿದೆ. ದೇಶ ನಮಗೇನು ನೀಡಿದೆ ಅನ್ನುವುದಕ್ಕಿಂತ ದೇಶಕ್ಕೆ ನಾವು ಏನು ನೀಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ದೇಶದ ಸೇವೆಗೆ ಎಲ್ಲರೂ ಪಣತೊಟ್ಟು ನಿಲ್ಲಬೇಕು. ಸದಾ ಒಗ್ಗಟ್ಟಿನ ಮಂತ್ರ ಜಪಿಸಬೇಕು. ಕುಂಚೂರು ಗ್ರಾಮದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನೆಲದ ಮಣ್ಣನ್ನು ಬಹಳ ಗೌರವಿತವಾಗಿ ಕಳಿಸಕೊಡಬೇಕಾಗಿ ಇರುವುದರಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ನೆಹರು ಯುವ ಕೇಂದ್ರದವರಿಗೆ ನೀಡಲಾಗುವುದು. ಇಲ್ಲಿಂದ ಅವರು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಕಳಿಸಿಕೊಡುತ್ತಾರೆ.
