
ಉದಯವಾಹಿನಿ ಮಸ್ಕಿ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಇಲ್ಲಿನ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಅಕ್ರೋಶ ಹೊರ ಹಾಕಿದರು.ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಮಾತನಾಡಿ, ಮಳೆ ಅಭಾವದಿಂದ ಎಲ್ಲಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಅಲ್ಪ ಸ್ವಲ್ಪ ಬಿದ್ದ ಮಳೆಯಿಂದ ಬಹುತೇಕ ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ, ಆದರೆ ಸರಕಾರ ಏಳು ತಾಸಿನ ಬದಲು ಬರಿ 5ತಾಸು ವಿದ್ಯುತ್ ಪೂರೈಕೆ ಮಾಡುವುದರ ಮೂಲಕ ಅನ್ನದಾತನ ಗಾಯದ ಮೇಲೆ ಬರೆ ಎಳೆದಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ವ್ಯವಸ್ಥೆಯಿಂದ ಅಂತರ್ಜಲ ಆಧಾರಿತ ಕೃಷಿ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಉಂಟಾಗಿದೆ. ರೈತರ ಹಿತದೃಷ್ಠಿಯಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಿ ಹಿಂದಿನಂತೆ ಹಗಲು 07 ಘಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು. ಬರ ಪರಿಹಾರ ಯೋಜನೆಗಳನ್ನು ಜಾರಿಗೆ ತರಬೇಕು. ಬರಗಾಲದ ದುಷ್ಪರಿಣಾಮ ಹೈನುಗಾರಿಕೆಯ ಮೇಲಾಗದಂತೆ ರೈತರಿಗೆ ಮೇವು ಪೂರೈಕೆ ಕ್ರಮ ವಹಿಸಬೇಕು. ಮೇವಿನ ಅಭಾವದಿಂದ ಹಸುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ತೆರೆಯಬೇಕೆಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಮುಖಂಡ ಮೌನೇಶ ನಾಯಕ, ಅಭಿಜಿತ್ ಪಾಟೀಲ, ಪ್ರಸನ್ನ ಪಾಟೀಲ, ಅಂದಾನೆಪ್ಪ ಗುಂಡಳ್ಳಿ ಸೇರಿದಂತೆ ಇನ್ನಿತರ ಮುಖಂಡರಿದ್ದರು.
