ಉದಯವಾಹಿನಿ, ಕಲಬುರಗಿ: ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಿರುದ್ಧ ತಡಬುಡವಿಲ್ಲದ ಆರೋಪ ಮಾಡುತ್ತಿರುವುದು ಅವರ ರಾಜಕೀಯ ಅಪ್ರಬುದ್ಧತೆ ಪ್ರದರ್ಶಿಸುವಂತಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ ಟೀಕಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕೃಷಿ ಸಾಲ ಹೆಚ್ಚಾಗಿದ್ದ ಕಾರಣಕ್ಕಾಗಿ ಶಿವಕುಮಾರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ವತಃ ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಾಗ್ಯೂ ರಾಜಕೀಯ ಲಾಭಕ್ಕಾಗಿ ಸಚಿವ ಶರಣಪ್ರಕಾಶ್ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ್ ಸಾವಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ತಮ್ಮೊಂದಿಗೆ ಶಿವಕುಮಾರ್ ಯಾವತ್ತೂ ಮಾತನಾಡಿಲ್ಲ. ಅಲ್ಲದೆ ಆತನ ಮುಖದರ್ಶನವೂ ತಮಗಿಲ್ಲ ಎಂದು ಸಚಿವ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ; ಈ ನಿಟ್ಟಿನಲ್ಲಿ ಸಮಗ್ರ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಷ್ಟಾದರೂ, ಖೂಬಾ ಅನಗತ್ಯವಾಗಿ ಸಚಿವರ ಹೆಸರನ್ನು ಎಳೆದು ತರುವ ಯತ್ನ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿ ಅನಾವರಣಗೊಳಿಸುವಂತಿದೆ ಎಂದಿದ್ದಾರೆ.
