ಉದಯವಾಹಿನಿ,ಗಾಂಧಿನಗರ: ಗುಜರಾತ್‌ನಲ್ಲಿ ನವರಾತ್ರಿ ಸಂಭ್ರಮಾಚರಣೆ ಅಂಗವಾಗಿ ಗಾರ್ಬಾ ನೃತ್ಯ ಪ್ರದರ್ಶಿಸುವ ವೇಳೆ 10 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.ಹಿಂದಿನ 24 ಗಂಟೆಗಳ ಅವಧಿಯಲ್ಲಿ ಈ ಸಾವು ಸಂಭವಿಸಿವೆ.ಮೃತಪಟ್ಟವರಲ್ಲಿ ಬಾಲಕರಿಂದ ಹಿಡಿದು ಮಧ್ಯ ವಯಸ್ಸಿನ ಜನರು ಇದ್ದಾರೆ. ಅಹಮದಾಬಾದ್, ನವಸಾರಿ ಮತ್ತು ರಾಜ್‌ಕೋಟ್‌ನಲ್ಲಿ ಸಾವಿನ ಪ್ರಕರಣಗಳು ವರದಿಯಾಗಿವೆ.
ಖೇಡಾ ಜಿಲ್ಲೆಯ ಕಪದ್ವಂಜ್ ನಗರದಲ್ಲಿ ಗಾರ್ಬಾ ನೃತ್ಯ ಪ್ರದರ್ಶಿಸುತ್ತಿದ್ದ ವೇಳೆ 17 ವರ್ಷದ ವೀರ್ ಶಾ ಎಂಬಾತ ದಿಢೀರ್ ಕುಸಿದುಬಿದ್ದಿದ್ದಾರೆ. ಆತನ ಮೂಗಿನಲ್ಲಿ ರಕ್ತಸ್ರಾವವಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆಯೊಯ್ಯಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗಾರ್ಬಾ ನೃತ್ಯ ಮುಗಿಸಿಕೊಂಡು ಬೈಸಿಕಲ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಬಾಲಕ ಕೆಳಗೆ ಬಿದ್ದು ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಪೋಷಕರು ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದರು. ಬಳಿಕ ಆತನಿಗೆ ಔಷಧ ನೀಡಿದ್ದರು. ಮಲಗಿದ್ದ ಬಾಲಕ ಹಲವು ಗಂಟೆಗಳು ಕಳೆದರೂ ಎಚ್ಚರಗೊಂಡಿರಲಿಲ್ಲ. ಆತನನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದ ವೇಳೆ ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
