
ಉದಯವಾಹಿನಿ,ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ರಾವುತರಾಯ ಮಲ್ಲಯ್ಯ ದೇವರ ಜಾತ್ರೆ ಸಹಸ್ರಾರು ಭಕ್ತರ ಮದ್ಯೆ ವಿಜೃಂಭಣೆಯಿಂದ ಪ್ರತಿ ವರ್ಷವೂ ನಡೆಯುತ್ತಿದ್ದ ಬಂಡಿ ಉತ್ಸವ ಈ ಬಾರಿ ಸುಸೂತ್ರವಾಗಿ ಸಾಗದ ರಾವುತರಾಯ ಬಂಡಿ ಮಲ್ಲಯ್ಯನ ದೇವಸ್ಥಾನಕ್ಕೆ ಹೋಗುವ ಮಧ್ಯೆ ಮೂರು ಸಲ ಬಂಡಿಯ ಅಚ್ಚು ಕಟ್ಟಾಗಿದ್ದಕ್ಕೆ ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಗುರುವಾರದೊಂದು ನಸುಕಿನಲ್ಲಿ ಶೃಂಗಾರಗೊಂಡ ತೆರೆದ ಬಂಡಿಯಲ್ಲಿ ಆಸೀನನಾದ ರಾವುತರಾಯನ ಮೂರ್ತಿ, ಛತ್ರಿ ಚಾಮರಗಳೊಂದಿಗೆ ಅಶ್ವಾರೂಢನಾಗಿ ಹೊರಟು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮನೆದೊಡ್ಡಿ ಸ್ಥಳಕ್ಕೆ ಹೋಗಬೇಕಾದ ಸಂದರ್ಭದಲ್ಲಿ, ಪಟ್ಟಣದ ಮಾರುಕಟ್ಟೆ, ತಾಳಿಕೋಟಿ ರಸ್ತೆ ಹಾಗೂ ಮೊಹರೆ ವೃತ್ತದಲ್ಲಿ ಬಂಡಿಯ ಅಚ್ಚು ಕಟ್ಟಾದ ಕಾರಣ ಜಾತ್ರಾ ಇತಿಹಾಸದಲ್ಲಿ ಮೂರು ಬಾರಿ ಕಟ್ಟಾಗಿದ್ದು, ಮಳೆ ಬಾರದೆ ಬರದ ಛಾಯೆಯಲ್ಲಿ ಆತಂಕದಲ್ಲಿ ಜನತೆಗೆ ಇನ್ನಷ್ಟು ಸಂಕಷ್ಟ ಮೂಡಿಸಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪ್ರತಿ ವರ್ಷದಂತೆ ವಿಜಯಪುರದಿಂದ ನೂರಾರು ಭಕ್ತರು ಮಡಿಯಾಗಿ ಬಂದು ಹೂ ಹಾರಗಳನ್ನು ಅರ್ಪಿಸುವುದು ಸಾಂಪ್ರದಾಯ ಆದರೆ ಸಾಯಂಕಾಲ ಆದರೂ ಬಂಡಿ ದೇವಸ್ಥಾನಕ್ಕೆ ಹೋಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ.
ದೇವಸ್ಥಾನ ತಲುಪಿದ ನಂತರ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲಿನ ಶಿಡಿಗಟ್ಟೆಯ ಸ್ಥಳದಲ್ಲಿ ಭಕ್ತರ ಏಳು ಕೋಟಿ ಜಯಘೋಷದೊಂದಿಗೆ ಪೂಜಾರಿಗಳು ಶಸ್ತ್ರ ಹಾಕಿಕೊಳ್ಳುವ ಮೂಲಕ ಹೇಳಿಕೆ ನಡೆಯುತ್ತದೆ.
ನಂತರ ಬನ್ನಿ ಮಹಾಂಕಾಳಿ ವೃಕ್ಷಕ್ಕೆ ತೆರಳಿ 5 ಪ್ರದಕ್ಷಿಣೆ ಮಾಡಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನಕ್ಕೆ ಆಗಮಿಸಿದ ನಂತರ ರಾವುತರಾಯ ಗಂಗೆ ಮಾಳಮ್ಮನವರ ಮದುವೆಯ ಸಾಂಪ್ರದಾಯಿಕ ಪ್ರಸಂಗಗಳು ನಡೆಯುತ್ತಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಸುಸೂತ್ರವಾಗಿ ಸಾಗದ ರಾವುತರಾಯನ ಬಂಡಿ ಯಿಂದ ಜನತೆಗೆ ಬರದ ಛಾಯೆಯ ಆತಂಕದ ಜೊತೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಬಹುದು ಎಂಬುದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
*ಬೆಳಗ್ಗೆಯಿಂದಲೇ ದರುಶನ ಪಡೆದ ಮುಖಂಡರು*
ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಸೇರಿದಂತೆ ಹಲವಾರು ಮುಖಂಡರು ಹಾಗೂ ರಾಜ್ಯ ಅಂತರಾಜ್ಯದಿಂದ ಬಂದ ಭಕ್ತಾದಿಗಳು ಬೆಳಗ್ಗೆಯಿಂದಲೇ ದರುಶನ ಪಡೆದರು.
