ಉದಯವಾಹಿನಿ, ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ಎರಡು ದಿನಗಳ ಕಾಲ ತಮ್ಮ ತವರು ರಾಜ್ಯ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ₹5,950 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಕೆಲವು ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಸೋಮವಾರ ಬೆಳಿಗ್ಗೆ ಬನಸ್ಕಾಂತ ಜಿಲ್ಲೆಯಲ್ಲಿರುವ ಅಂಬಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮೆಹಸಾನ ಜಿಲ್ಲೆಯ ದಭೋಡಾ ಗ್ರಾಮದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮೆಹಸಾನ ಮತ್ತು ಅಹಮಬಾದ್ ಜಿಲ್ಲೆಗಳ ನಡುವಿನ ಎರಡು ರೈಲ್ವೆ ಯೋಜನೆಗಳು, ಗುಜರಾತ್ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಪೊರೇಷನ್ ಯೋಜನೆ ಸೇರಿ ಇನ್ನಿತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.ಅಕ್ಟೋಬರ್ 31ರಂದು ಮೋದಿ ಅವರು ನರ್ಮದಾ ಜಿಲ್ಲೆಯಲ್ಲಿರುವ ಏಕತಾ ನಗರದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜಯಂತಿ ಪ್ರಯುಕ್ತ ಆಯೋಜಿಸಲಾದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದು, ಏಕತಾ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ.
