
ಉದಯವಾಹಿನಿ ದೇವರಹಿಪ್ಪರಗಿ: ಐತಿಹಾಸಿಕ ರಾವುತರಾಯ- ಆರಾಧಕರಾದ ಮಲ್ಲಯ್ಯನ ನಾಲ್ಕು ದಿನಗಳ ಅದ್ದೂರಿ ಜಾತ್ರೆ ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರ ನಡುವೆ ರವಿವಾರ ಸಂಪನ್ನವಾಯಿತು.ಪಟ್ಟಣದ ಹೊರವಲಯದಲ್ಲಿರುವ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಗುರುವಾರ ತೆರಳಿದ್ದ ರಾವುತರಾಯನನ್ನು ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾಧಿಗಳ ಜಯಘೋಷದ ನಡುವೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು. ಈ ಬಾರಿ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಜಿಲ್ಲೆಗಳು ಹಾಗೂ ಪಕ್ಕದ ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ವಾಸ್ತವ್ಯ ಹೂಡಿ ನಾನಾ ಪೂಜಾಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು. ಬೆಳಗ್ಗೆ 6ಕ್ಕೆ ಪ್ರಾರಂಭವಾದ ಅಶ್ವರೂಡ ಬಂಡಿ ಭವ್ಯ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತಾಧಿಗಳು ಭಕ್ತಿಯೊಂದಿಗೆ ಭಂಡಾರ ಎಸೆದು ‘ಏಳುಕೋಟಿ, ಏಳುಕೋಟಿ, ಏಳುಕೋಟಿಗೇ’ ಎಂಬ ಘೋಷಣೆಗಳೊಂದಿಗೆ ಭಕ್ತಿ ಭಾವಸಮರ್ಪಿಸಿದರು. ಜಾತ್ರೆಯಲ್ಲಿ ವಿಶೇಷವಾಗಿ ರಾವುತರಾಯನ ಆರಾಧಕರಾದ
ಮಹಿಳಾ ಮತ್ತು ಪುರುಷ ವಗೈಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ತುಂಬ ಭಂಡಾರ ಬಡಿದುಕೊಂಡು ರಾವುತರಾಯನ ಬಂಡಿ ಮುಂದೆ ಮೈದುಂಬಿ ಕುಣಿಯುತ್ತ ಜನರ ಗಮನ ಸೆಳೆದರು, ಪಟ್ಟಣದ ಜನರು ನಾಲ್ಕು ದಿನಗಳ ವರೆಗೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಪ್ರತಿದಿನ ಪೂಜಾ ಕಾರ್ಯ ವಿವಿಧ ಬಡಾವಣೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೆಗೆ ಮೆರಗು ತಂದರು. ಜಾತ್ರೆಯ ಅಂಗವಾಗಿ ಕಲ್ಲುಗುಂಡು, ಉಸುಕಿನ ಚೀಲ ಸೇರಿದಂತೆ ಭಾರ ಎತ್ತುವ ಸ್ಪರ್ಧೆಗಳು ಸಹ ಜರುಗಿ ಪೈಲ್ವಾನರ ಶಕ್ತಿ ಪ್ರದರ್ಶನಗಳಾದವು ನಡೆದವು.
ಪಟ್ಟಣದ ಗೆಳೆಯರ ಬಳಗದ ಹಾಗೂ ಇತರರು ಸೇರಿದಂತೆ ಸ್ವಯಂ ಪ್ರೇರಿತವಾಗಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಉಚಿತ ಅನ್ನಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಭಕ್ತಿ ಮೆರೆದರು.
ಜಾತ್ರೆಯುದ್ದಕ್ಕೂ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ನೇತೃತ್ವದಲ್ಲಿ ಪ ಪಂ ಮುಖ್ಯಾಧಿಕಾರಿ ಎಲ್.ಡಿ ಮುಲ್ಲಾ,ಸಿಬ್ಬಂದಿ ವರ್ಗ ಹಾಗೂ ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ವರ್ಗ ಸೂಕ್ತ ಬಂದೋಬಸ್ತ್ ವಹಿಸಿದ್ದರಿಂದ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಪ್ರಶಂಸೆಗೆ ಪಾತ್ರರಾದರು.
