ಉದಯವಾಹಿನಿ, ವಾಷಿಂಗ್ಟನ್: ಇಸ್ರೇಲ್ ದಾಳಿ ನಡೆಸುತ್ತಿರುವ ಗಾಝಾ ಪ್ರದೇಶದಲ್ಲಿ ಹಮಾಸ್ ಹೋರಾಟಗಾರರು ಮತ್ತು ನಾಗರಿಕರನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಸ್ಥಳೀಯ ನಾಗರಿಕರನ್ನು ರಕ್ಷಿಸಬೇಕು. ಅಲ್ಲದೆ ಭಯೋತ್ಪಾದಕರು ಮತ್ತು ನಾಗರಿಕರ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಲಭ್ಯವಿರುವ ಎಲ್ಲ ವಿಧಾನಗಳನ್ನು ಇಸ್ರೇಲ್ ತೆಗೆದುಕೊಳ್ಳಬೇಕು ಎಂದು ಇಸ್ರೇಲ್‌ಗೆ ಶ್ವೇತಭವನ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಸ್ರೇಲ್‌ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇದೆ. ಆದರೆ ಆ ನಿಟ್ಟಿನಲ್ಲಿ ನಾಗರಿಕರನ್ನು ರಕ್ಷಿಸುವ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಬೇಕಾದ ಅಗತ್ಯವೂ ಇದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ದೂರವಾಣಿ ಸಂಭಾಷಣೆ ನಡೆಸಿದ ವೇಳೆ ಸ್ಪಷ್ಟಪಡಿಸಿದ್ದಾರೆ. ಗಾಜಾದಲ್ಲಿ ನಾಗರಿಕರನ್ನು ರಕ್ಷಿಸುವುದು ಅಗತ್ಯ ಹಾಗೂ ಅಲ್ಲಿಗೆ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವದ ಬಹುತೇಕ ಮುಖಂಡರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಎಚ್ಚರಿಕೆ ನೀಡಿದೆ. ಗಾಜಾದಲ್ಲಿ ನಾಗರಿಕ ಸುವ್ಯವಸ್ಥೆ ಕುಸಿಯತ್ತಿದೆ ಎಂದು ವಿಶ್ವಸಂಸ್ಥೆ ಕೂಡಾ ಅಭಿಪ್ರಾಯಪಟ್ಟಿತ್ತು.
