ಉದಯವಾಹಿನಿ, ಛತ್ರಪತಿ ಸಾಂಭಾಜಿನಗರ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಶಾಸಕ ಪ್ರಕಾಶ್ ಸೋಲಂಕೆ ಅವರಿಗೆ ಸೇರಿದ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಾಠ ಮೀಸಲಾತಿ ಹೋರಾಟ ಮತ್ತು ಹೋರಾಟಗಾರ ಮನೋಜ್ ಜರಂಗೆ ಅವರ ಉಪವಾಸ ಸತ್ಯಾಗ್ರಹದ ಕುರಿತಂತೆ ಸೋಲಂಕೆ ನೀಡಿದ್ದಾರೆಂಬ ಅವಹೇಳನಕಾರಿ ಹೇಳಿಕೆ ಕುರಿತಾದ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಆ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಮಜಲ್‌ಗಾಂವ್‌ನ ಸೋಲಂಕೆ ನಿವಾಸದ ಬಳಿ ನಿಂತಿದ್ದ ಕಾರಿಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ.
