ಉದಯವಾಹಿನಿ,ಮುದ್ದೇಬಿಹಾಳ: ಕೆಲವು ಸಕ್ಕರೆ ಕಾರ್ಖಾನೆಯವರು ರೈತರು ಕಾರ್ಖಾನೆಗೆ ನುರಿಸಲು ತರುವ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ದೂರು ಕೇಳಿಬರುತ್ತಿದೆ. ರೈತರು ಈ ಬಗ್ಗೆ ಆಧಾರ ಸಮೇತ ದೂರು ಸಲ್ಲಿಸಿದರೆ ಅಂಥ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿಯಲ್ಲಿ ರವಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಮುಂದಿನ ವರ್ಷದಿಂದ ಕಬ್ಬಿನ ತೂಕದಲ್ಲಿ ಕಾರ್ಖಾನೆಯವರು ನಡೆಸುವ ಅಕ್ರಮ ತಡೆಯಲು ಸರ್ಕಾರದ ವತಿಯಿಂದಲೇ ಇಲೆಕ್ಟ್ರಾನಿಕ್ ವೇಯಿಂಗ್ ಮಷಿನ್ ಅಳವಡಿಸಲಾಗುತ್ತದೆ. ಇದರಿಂದ ಮೋಸ ತಡೆಗಟ್ಟುವುದು ಸಾಧ್ಯವಿದೆ ಎಂದರು.ಸಕ್ಕರೆ ಕಾರ್ಖಾನೆಯಲ್ಲಿ ತಯಾರಾಗುವ ಇಥೆನಾಲ್ ಸೇರಿ ಎಲ್ಲ ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡಬೇಕು. ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರದಂತೆ ಕಬ್ಬು ಖರೀದಿಸಬೇಕು. ಕಾರ್ಖಾನೆಗಳು ರೈತರಿಗೆ ಉಪಯುಕ್ತವಾಗಿ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಕಡ್ಡಾಯವಾಗಿ ಪಾಲಿಸಬೇಕು ಎಂದರು.
*ಜಿಲ್ಲೆ ಹೆಸರು ಬದಲಾವಣೆಗೆ ಪ್ರತಿಕ್ರಿಯೆ:
ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ, ಬಸವ ನಾಡು ಎನ್ನುವ ಹೆಸರು ಇಡಲು ಚರ್ಚೆ ನಡೆದಿರುವುದು ರಾಜಕೀಯ ಲಾಭದ ಹೊರತಾಗಿರಬೇಕು ಎಂದು ಪುನರುಚ್ಚರಿಸಿದ ಸಚಿವ ಪಾಟೀಲರು ನಾನೂ ಬಸವಾಭಿಮಾನಿ, ಬಸವ ನಾಡಿನ ಬಸವಭಕ್ತ. ರಾಜಕೀಯ ಕಾರಣಕ್ಕಾಗಿ ಹೆಸರು ಬದಲಾವಣೆ ವಿಷಯ ಮುನ್ನಲೆಗೆ ತರುವುದು ಶೋಭೆ ತರುವಂಥದ್ದಲ್ಲ ಎಂದರು. ಒಂದು ವೇಳೆ ಕರ್ನಾಟಕಕ್ಕೆ ಬಸವ ನಾಡು ಎಂದು ಹೆಸರಿಸುವುದು ಸಮಂಜಸವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಕರ್ನಾಟಕ ಹೆಸರು ಬಂದದ್ದು ಏಕೀಕರಣದ ವ್ಯವಸ್ಥೆಯಲ್ಲಿ. ಅಂಥದ್ದೇ ಏಕೀಕರಣದ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಬಸವನಾಡು ಎಂದು ಹೆಸರಿಸಿದರೆ ಅಭ್ಯಂತರವಿಲ್ಲ. ಯಾವುದೇ ವಿಚಾರವಾದರೂ ರಾಜಕೀಯ ಹೊರತಾಗಿ ಏಕೀಕೃತ ವಿಚಾರವಾಗಿರಬೇಕು ಎಂದರು.

*ಡಿಸಿಸಿ ಬ್ಯಾಂಕಗೆ ಅವಿರೋಧ ಸಂತಸ:
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಗೆ ಮತ್ತೆ ನನ್ನನ್ನು ಅದ್ಯಕ್ಷನನ್ನಾಗಿ ಅವಿರೋಧ ಆಯ್ಕೆ ಮಾಡಿರುವುದು ಸಂತಸ ತರುವಂಥದ್ದು. ಬ್ಯಾಂಕಿನ ಶತಮಾನೋತ್ಸವ ಸಂಭ್ರಮದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಆದರೆ ಬ್ಯಾಂಕನ ನಿರ್ದೇಶಕರ ಅವಿರೋಧ ಆಯ್ಕೆಗೆ ಮುದ್ದೇಬಿಹಾಳ ಪಿಕೆಪಿಎಸ್ ಮತಕ್ಷೇತ್ರ ಸ್ಪರ್ಧೆ ನೀಡಿ ಅವಿರೋಧ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು ವಿಷಾಧನೀಯ ಎಂದರು.

ಇದಕ್ಕೂ ಮುನ್ನ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಸಂಗಮೇಶ್ವರ ಮತ್ತು ಬಸವಣ್ಣ (ನಂದಿ)ನ ದರ್ಶನಾಶಿರ್ವಾದ ಪಡೆದುಕೊಂಡರು. ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು, ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳೊಳ್ಳಿ, ಮಾಜಿ ಪ್ರಧಾನ ಸಂಗನಗೌಡ ಪಾಟೀಲ, ಮುದ್ದೇಬಿಹಾಳದ ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೀರಣ್ಣ ತಡಸದ, ಬಾಬು ಬಿರಾದಾರ ಸೇರಿ ಹಲವರು ಸಚಿವರೊಂದಿಗೆ ಇದ್ದರು.

Leave a Reply

Your email address will not be published. Required fields are marked *

error: Content is protected !!