ಉದಯವಾಹಿನಿ, ಕೋಲಾರ: ತುಮಕೂರು ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ೨೦೨೨-೨೩ನೇ ಸಾಲಿನ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ರಾಯಚೂರು ಜಿಲ್ಲಾ ತಂಡವನ್ನು ಪರಾಭವಗೊಳಿಸಿದ ಕೋಲಾರ ಜಿಲ್ಲಾ ನೌಕರರ ತಂಡ ಸತತ ೨ನೇ ಬಾರಿ ಜಯ ದಾಖಲಿಸಿದ್ದು, ಜಿಲ್ಲೆಯ ಎಲ್ಲಾ ನೌಕರರು, ಸಂಘದ ಪದಾಧಿಕಾರಿಗಳ ಪರವಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಅಭಿನಂದಿಸಿದ್ದಾರೆ.ಜಿಲ್ಲೆಯ ಘನತೆ ಹೆಚ್ಚಿಸಿದ ಕೋಲಾರ ಕ್ರಿಕೆಟ್ ತಂಡವನ್ನು ಅಭಿನಂದಿಸಿರುವ ಅವರು, ಗುಂಪು ಆಟಗಳಲ್ಲಿ ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆಯಾಗಿದ್ದು, ಇದರಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ, ಸತತ ಅಭ್ಯಾಸ, ಆತ್ಮವಿಶ್ವಾಸದ ಮೂಲಕ ಪಂದ್ಯದಲ್ಲಿ ಸೆಣಸಾಡಿರುವ ನೌಕರರ ಪರಿಶ್ರಮದಿಂದಾಗಿ ಈ ಟ್ರೋಫಿ ಲಭಿಸಿದೆ ಎಂದು ಶುಭ ಹಾರೈಸಿದ್ದಾರೆ.
