ಉದಯವಾಹಿನಿ ದೇವರಹಿಪ್ಪರಗಿ: ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗೆಯಲ್ಲಿ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿವೆ. ಅವರೆಲ್ಲರ ಸೇವೆಯನ್ನು ನಾವೆಲ್ಲಾ ಅತ್ಯಂತ ಕೃತಜ್ಞತೆಯಿಂದ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸ್ಮರಿಸೋಣ. ಅವರು ತೋರಿದ ಹಾದಿಯಲ್ಲಿ ಸಾಗೋಣ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ಪಟ್ಟಣದಲ್ಲಿ ಬುಧವಾರದಂದು ಶಾಸಕರ ಮಾದರಿ ಶಾಲಾ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದಿಂದ ಕರ್ನಾಟಕ ರಾಜ್ಯವಾಗಿ 50ನೇ ವರ್ಷದ ಶುಭ ಸಂದರ್ಭದಲ್ಲಿ ಸಮಗ್ರ ಕನ್ನಡ ನಾಡಿನ ಬೆಳವಣಿಗೆ ಅನೇಕ ಗಣ್ಯರು ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಸಕಲ ಕಲೆ, ಸಾಹಿತ್ಯ, ಸಂಗೀತ ಸಂಸ್ಕೃತಿಗೆ ತವರಾಗಿದೆ. ಕರ್ನಾಟಕದ ಏಕೀಕರಣ ಹೋರಾಟವನ್ನು ಯಾರು ಮರೆಯುವಂತಿಲ್ಲ ಹಲವು ಮಹನೀಯರ ಶ್ರಮದ ಫಲವಾಗಿ ಕರ್ನಾಟಕದ ಉದಯವಾಯಿತು. ಈ ನಿಟ್ಟಿನಲ್ಲಿ ನಾವು ಕನ್ನಡ ನಾಡು-ನುಡಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನಮ್ಮ ತಾಲೂಕಿನ ಹಾಗೂ ಜಿಲ್ಲೆಯಿಂದ ಹಲವಾರು ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ರಾಜೋತ್ಸವ ಸಂದರ್ಭದಲ್ಲಿ ಸನ್ಮಾನಿಸುವ ಮೂಲಕ ಗೌರವಿಸಲಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರದ ಜನತೆಯ ಮಗನಾಗಿ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸಗಳೊಂದಿಗೆ ಸದಾ ಕಾಲ ಜನರೊಂದಿಗೆ ಇರುತ್ತೇನೆ,ನೂತನ ತಾಲೂಕಿಗೆ ಬರ ಬೇಕಾದ ಕಚೇರಿಗಳು ತರುವ ಮೂಲಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ತಾಲೂಕು ಆಡಳಿತದ ಪರವಾಗಿ ಎಲ್ಲರನ್ನು ಸ್ವಾಗತಿಸಿದರು.
ಪ್ರಸ್ತಾವಿಕವಾಗಿ ಕಸಾಪ ಅಧ್ಯಕ್ಷ ಕಬೂಲ್ ಕೂಕಟನೂರ ಮಾತನಾಡಿದರು.ರಾಜ್ಯೋತ್ಸವದ ಪಥ ಸಂಚಲನ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಶಾಲೆಯ ವಿದ್ಯಾರ್ಥಿಗಳಿಂದ ನಾಡಿನ ಹಲವು ಗಣ್ಯರ ವೇಷ ಭೂಷಣದ ಮೂಲಕ ಎಲ್ಲರ ಗಮನ ಸೆಳೆದರು. ಪಟ್ಟಣದ ಮೊಹರೆ ವೃತ್ತದಿಂದ ಕನ್ನಡ ತಾಯಿ ಭಾವಚಿತ್ರವನ್ನು ಹೊತ್ತು, ಕನ್ನಡ ಬಾವುಟಗಳನ್ನು ಹಿಡಿದ ವಿದ್ಯಾರ್ಥಿಗಳು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಭಾರತಿ ಚೆಲುವಯ್ಯ, ಪ.ಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಂ.ಜಿ.ಯಂಕಂಚಿ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎ.ಎಚ್.ವಾಲಿಕಾರ, ಮುಖಂಡರುಗಳಾದ ಡಾ.ಆರ್.ಆರ್.ನಾಯಕ, ರಿಯಾಜ್ ಯಲಗಾರ, ಚನ್ನವೀರಪ್ಪ ಕುದುರಿ,ಕನ್ನಡ ಪರ ಸಂಘಟನೆಗಳ ಅಧ್ಯಕ್ಷರುಗಳಾದ ರಹಿಮಾನ್ ಕನಕಾಲ್, ಪ್ರಕಾಶ ಡೋಣೂರ ಮಠ, ಕಾನಿಪ ತಾಲೂಕು ಅಧ್ಯಕ್ಷ ಸಂಜೀವ ಉತ್ನಾಳ ಸೇರಿದಂತೆ ಪ.ಪಂ ಸರ್ವ ಸದಸ್ಯರು, ಪಟ್ಟಣದ ಪ್ರಮುಖರು, ಗಣ್ಯರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧೀಕ್ಷಕರಾದ ಜಗನ್ನಾಥ ಸಜ್ಜನ್ ಅವರು ನಿರೂಪಿಸಿ ವಂದಿಸಿದರು.
