ಉದಯವಾಹಿನಿ, ಕೋಲಾರ:ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಅಷ್ಠಮೂರ್ತಮ್ಮ ಕಲಾ ಸಂಘದ ಸಹಯೋಗದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದ್ದು, ಸ್ಥಳೀಯ ೧೦೦ ಮಂದಿ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಸಾಪ ಸುಗಟೂರು ಹೋಬಳಿ ಕಾರ್ಯದರ್ಶಿ ಸಿ.ಬಿ.ವಿಶ್ವನಾಥರೆಡ್ಡಿ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕನ್ನಡ ನಾಡು,ನುಡಿಗಾಗಿ ಧ್ವನಿಯೆತ್ತುವುದರ ಜತೆಗೆ ಹೊರ ರಾಜ್ಯಗಳಿಂದ ಇಲ್ಲ ಜೀವನ ನಡೆಸಲು ಬಂದಿರುವವರಿಗೂ ಕನ್ನಡ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಕನ್ನಡವನ್ನು ಸ್ವಷ್ಟವಾಗಿ ಓದುವ,ಬರೆಯುವ,ಮಾತನಾಡುವುದನ್ನು ಚೆನ್ನಾಗಿ ಕಲಿತರೆ ಅದೇ ನಾಡು,ನುಡಿಗೆ ನೀಡುವಂತಹ ಗೌರವವಾಗುತ್ತದೆ, ಈ ನಿಟ್ಟಿನಲ್ಲಿ ಪೋಷಕರು ಮೊದಲು ತಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು, ನಮ್ಮ ಭಾಷೆಯನ್ನು ನಾವೇ ಮಾತನಾಡಬೇಕು, ಉಳಿಸಿ ಬೆಳೆಸಬೇಕು ಎಂದರು.
ಸುಗಟೂರು ಹೋಬಳಿ ಕಸಾಪ ನಿಕಟಪೂರ್ವ ಅಧ್ಯಕ್ಷ ಚಿ.ನಾ.ನಾಗೇಶ್ ಮಾತನಾಡಿ, ಕನ್ನಡ ನಾಡಿನ ಏಳ್ಗೆಗಾಗಿ ಶ್ರಮಿಸಿದ ಮಹನೀಯರ ಆದರ್ಶ ಪಾಲಸುವುದು ಅಗತ್ಯ, ಕನ್ನಡ ನಾಡು,ನುಡಿಗೆ ಧಕ್ಕೆ ಬರುವಂತಾದರೆ ಯಾವುದೇ ಹೋರಾಟಕ್ಕೂ ನಾವು ಸಿದ್ದರಾಗಬೇಕೆಂದರು. ಕನ್ನಡಾಭಿಮಾನ ಈ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ, ಇತರೆ ಭಾಷೆ ಕಲಿಯುವುದು ತಪ್ಪಲ್ಲ ಆದರೆ ತಾಯಿಭಾಷೆಗೆ ನೀಡುವ ಗೌರವಕ್ಕೆ ಚ್ಯುತಿ ಬರಬಾರದು ಎಂದು ತಿಳಿಸಿ, ಕನ್ನಡ ನಾಡು,ನುಡಿ,ಜಲ ರಕ್ಷಣೆಗಾಗಿ ಶ್ರಮಿಸಿದ ನಾಯಕರನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ತೊಟ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಅನಿತ ಚೌಡರೆಡ್ಡಿ, ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎಲ್.ಗೋಪಾಲಕ್ರಷ್ಣಪ್ಪ, ಶ್ರೀ ಅಷ್ಟಮೂರ್ತೆಮ್ಮ ಜಾನಪದ ಸಂಘದ ಕಾರ್ಯದರ್ಶಿಗಳಾದ ಅಶ್ವತ್ಥಪ್ಪ ವೆಂಕಟೇಶಪ್ಪ ರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!