ಉದಯವಾಹಿನಿ ಯಾದಗಿರಿ :  ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾಳಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ಶಿಕ್ಷಕರಿಗೆ ತಿಳಿಸಿದ್ದಾರೆ.ನಗರದ ಶಾಲಾ ಶಿಕ್ಷಣ ಇಲಾಖೆ ಕಛೇರಿಯಲ್ಲಿ ಇಂದು *ನೂತನವಾಗಿ ನೇಮಕಗೊಂಡ ಶಿಕ್ಷಕರಿಗೆ ನೇಮಕಾತಿ ಆದೇಶ ಪ್ರಮಾಣ ಪತ್ರ ವಿತರಿಸಿ* ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಇದ್ದ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ದಾವೆ ಇದ್ದಿದ್ದರಿಂದ ಶಿಕ್ಷಕರ ನೇಮಕಾತಿಯಾಗದೆ ತೊಂದರೆ ಅನುಭವಿಸುತ್ತಿದ್ದ ಶಿಕ್ಷಕರಿಗೆ ಸರಕಾರ ಸ್ಪಂದಿಸಿ ನೇಮಕಾತಿ ಆದೇಶ ಹೊರಡಿಸುವ ಮೂಲಕ ನೆರವಾಗಿದ್ದು, ಶಿಕ್ಷಕರು ಕೂಡ ಅತ್ಯಂತ ಹಿಂದುಳಿದ ಈ ಭಾಗದಲ್ಲಿ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ವಿಶೇಷ ಕಾಳಜಿ ಹಾಗೂ ಸಮಯವನ್ನು ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಗಮನ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಪೂರ್ಣಾವಧಿ ಶಿಕ್ಷಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನೀಡಿದ ಅನುದಾನದಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಶೇ.99 ರಷ್ಟು ಶಿಕ್ಷಕರನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಇದ್ದ ಶಿಕ್ಷಕರ ಕೊರತೆಯ ಕೂಗನ್ನು ಹೋಗಲಾಡಿಸಲು ಈ ಭಾಗದ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಪ್ರಯತ್ನದ ಫಲವಾಗಿ ಹೆಚ್ಚಿನ ಶಿಕ್ಷಕರ ನೇಮಕಾತಿಯಾಗಿದೆ ಎಂದು ಹೇಳಿದರು.ರಾಜ್ಯ ಸರಕಾರದಿಂದ ಈ ಭಾಗದ ಶೈಕ್ಷಣಿಕ ಉನ್ನತೀಕರಣಕ್ಕೆ  6ರಿಂದ 8ನೇ ತರಗತಿಯ  885 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ ಜಿಲ್ಲೆಯ 622 ಅಭ್ಯರ್ಥಿಗಳಲ್ಲಿ ಕೌನ್ಸಲಿಂಗ್ ಮೂಲಕ ನೇಮಕಾತಿಗೆ ಆದೇಶ ನೀಡಲಾಗುತ್ತಿದೆ. ಇಂದು ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಇನ್ನೂಳಿದ ಹುದ್ದೆಗಳು ನ್ಯಾಯಾಲಯದ ಆದೇಶದ ಆಧಾರದಮೇಲೆ  ಕ್ರಮ ಆಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ನೂತನ ಸರಕಾರ ಬಂದ ತಕ್ಷಣ ಶೈಕ್ಷಣಿಕ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಣೆಗೆ  ಕ್ರಮ ಕೈಗೊಂಡಿದೆ. ಈ ಭಾಗದ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಶೇ.25 ರಷ್ಟು ಅನುದಾನ ನೀಡಲಾಗುತ್ತಿದೆ. ಅಕ್ಷರ ಅವಿಷ್ಕಾರ ಕಾರ್ಯಕ್ರಮದಡಿ ಈ ಭಾಗದ ಶಾಲೆಗಳ ಕೊರತೆ ನೀಗಿಸಲು ವಿಶೇಷ ಗಮನ ನೀಡಲಾಗುತ್ತಿದೆ. ಅದರಂತೆ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒಟ್ಟು 750 ಕೋ.ರೂ.ಗಳ ಅನುದಾನ ಕಾಯ್ದಿರಿಸುವ ಕುರಿತಂತೆ ಮುಂದಿನ 15 ದಿನಗಳಲ್ಲಿ ಕ್ರಿಯಾ ಯೋಜನೆಗೆ ಮಂಜೂರಾತಿ ಸಹ ದೊರೆಯಲಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಪೂರ್ಣಾವಧಿ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರನ್ನು ನೀಡಿದ್ದು, ಈಗಾಗಲೇ ಕೌನ್ಸಲಿಂಗ್ ಮೂಲಕ ನೇಮಕಗೊಂಡಿರುವ ಶಿಕ್ಷಕರು ಈ ಭಾಗದ ಮಕ್ಕಳ ಭವಿಷ್ಯಕ್ಕಾಗಿ ವಿಶೇಷ ಗಮನ ನೀಡಬೇಕು. ಫಲಿತಾಂಶ ರ‍್ಯಾಂಕಿಂಗ್  ಮೇಲಕ್ಕೆ ತರಲು ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಗಮನ ನೀಡುವ ಮೂಲಕ ತಮ್ಮ ಹಾಗೂ ಈ ಜಿಲ್ಲೆಯ ಕೀರ್ತಿ ಹೆಚ್ಚಿಸುವ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು.ಯಾದಗಿರಿ ವಿಧಾನಸಭಾ ಕ್ಷೇತ್ರದ  ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಕಲಬುರಗಿ ವಿಭಾಗದ ಸಹನಿರ್ದೇಶಕರು ಹೆಚ್.ಸಿ.ಚಂದ್ರಶೇಖರ್, ಜಿಲ್ಲಾ ಉಪನಿರ್ದೇಶಕರು ಶ್ರೀ ಹೆಚ್.ಟಿ.ಮಂಜುನಾಥ, ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮ ಢವಳಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!