
ಉದಯವಾಹಿನಿ,ಶಿಡ್ಲಘಟ್ಟ: ಬಿಸಿಯೂಟ ತಯಾರಕರನ್ನು ಮಾರ್ಚ್ 31ಕ್ಕೆ ಬಿಡುಗಡೆಗೊಳಿಸಿ, ಜೂನ್ 1ಕ್ಕೆ ಪುನಃ ನೇಮಕಾತಿ ಮಾಡಿಕೊಳ್ಳುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಜೊತೆಗೆ ಸೇವಾ ಭದ್ರತೆ ನೀಡಬೇಕು ಎಂದು ಅಕ್ಷರ ದಾಸೋಹ ಸಮಿತಿಯ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ ಒತ್ತಾಯಿಸಿದರು.ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಂಗಳೂರಿನ ವಿಧಾನಸೌಧ ಚಲೋ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮಾಡಲಿದ್ದಾರೆ.ಅದರಂತೆ ನ.7 ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಬಿಸಿಯೂಟ ನೌಕರರು ಧರಣಿಯಲ್ಲಿ ಪಾಲ್ಗೊಳ್ಳಿದ್ದಾರೆ. ರಾಜ್ಯ ಸರ್ಕಾರ ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿದೆ. ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆ ತೆರೆಯುವಂತೆ ಆದೇಶಿಸಿರುವುದನ್ನು ಹಿಂಪಡೆದು ಮುಖ್ಯ ಶಿಕ್ಷಕರು ಮತ್ತು ಮುಖ್ಯ ಅಡುಗೆಯವರ ಜಂಟಿ ಬ್ಯಾಂಕ್ ಖಾತೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ನಮಗೆ 120 ರೂಪಾಯಿ ಕನಿಷ್ಠ ವೇತನ ನೀಡುತ್ತಿದೆ ಇದರಿಂದ ನಮ್ಮ ಮಕ್ಕಳನ್ನು ಖಾಸಗಿ ಶಾಲೆ ಇರಲಿ ಕನಿಷ್ಠ ಸರ್ಕಾರಿ ಶಾಲೆಯಲ್ಲೂ ಸಹ ಓದಿಸಲು ಸಾಕಾಗುತ್ತಿಲ್ಲ. ಸರ್ಕಾರದಿಂದ ಎಲ್ಲಾ ರೀತಿಯಲ್ಲೂ ಸಹ ಬೆಲೆಗಳು ಏರಿಕೆ ಮಾಡುತ್ತಿದ್ದಾರೆ, ಅದೇ ರೀತಿ ನಮಗೂ ಸಹ ಸಂಬಳವನ್ನು ಏರಿಕೆ ಮಾಡಿ ನಾವು ಇದನ್ನೇ ನಂಬಿಕೊಂಡು ನಾವು ಜೀವನ ಸಾಗಿಸುತ್ತಿದ್ದೇವೆ ಎಂದರು. ನಿವೃತ್ತಿಯಾದ ನೌಕರರಿಗೆ ₹1 ಲಕ್ಷ ಠೇವಣಿ ನೀಡಬೇಕು. ಕೆಲಸದ ಸ್ಥಳಗಳಲ್ಲಿ ಮರಣ ಹೊಂದಿದರೆ ₹25 ಲಕ್ಷ ಪರಿಹಾರ ನೀಡಬೇಕು. ರಾಜ್ಯದ ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚುವರಿಯಾಗಿ ₹1 ಸಾವಿರ ನೀಡುವಂತೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದನ್ನು 2023ರ ಜನವರಿಯಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆಯಿಂದ 6ಗಂಟೆಗೆ ಬದಲಾಯಿಸಬೇಕು. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ಕಡ್ಡಾಯವಾಗಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಶಾಂತಮ್ಮ, ಮಂಜುಳ, ಮೀನಾಕ್ಷಿ,ಕವಿತಾ, ಯಶೋಧ, ಭವಾನಿ ಮತ್ತಿತರರು ಇದ್ದರು.
