
ಉದಯವಾಹಿನಿ, ಔರಾದ್ : ನಮ್ಮಲ್ಲಿನ ದೌರ್ಬಲ್ಯಗಳು ಗುರುತಿಸಿ ಯಶಸ್ಸಿಗೆ ಅಗತ್ಯವಾದ ಗುಣಗಳು ಹಾಗೂ ಮಾನವೀಯ ಮೌಲ್ಯಗಳು ಬೆಳೆಸಿಕೊಂಡು ಗುರಿಯತ್ತ ಸಾಗಬೇಕು ಎಂದು ಸಾಕ್ಷರತಾ ಜಿಲ್ಲಾ ಅಧಿಕಾರಿ ಶಿವರಾಜ ಪಾಟೀಲ್ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಂಭ್ರಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ಬೀದರ ವತಿಯಿಂದ ಆಯೋಜಿಸಿದ ವಿಶ್ವ ಮಾನವ ಸಂದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಅವರ ಬದುಕು ರೂಪಿಸಿಕೊಳ್ಳುವ ಸಾಮರ್ಥ್ಯವಿದ್ದು, ಪ್ರೀತಿ, ಕರುಣೆ, ಮಮತೆ, ಸಹಿಷ್ಣುತೆಯಿಂದ ನಾವೇ ಗುರಿ ನಿಗದಿಪಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಓಂಪ್ರಕಾಶ ದಡ್ಡೆ, ದೈಹಿಕ, ಮಾನಸಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಸ್ವಾವಲಂಬನೆ ಪಡೆಯುವುದೇ ಪರಿಪೂರ್ಣ ವ್ಯಕ್ತಿತ್ವದ ಗುರಿಯಾಗಿದ್ದು, ಕುವೆಂಪು ಅವರಂತದ ದಾರ್ಶನಿಕರ ವಿಚಾರಗಳಿಂದ ಇದು ಸಾಧ್ಯ ಎಂದರು. ಯನಗುಂದಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಸವರಾಜ ಮಠಪತಿ ಮಾತನಾಡಿದರು. ಸಂಕುಚಿತ ಮನೋಭಾವ, ಮತಾಂಧತೆ, ದ್ವೇಷ, ಅಸೂಯೆಯಿಂದ ನಡೆಯುವ ದುಷ್ಕೃತ್ಯಗಳ ಕುರಿತು ಮಕ್ಕಳಿಗೆ, ಹಿರಿಯರಿಗೆ ತಿಳಿಹೇಳಿ ಸುಂದರ ಜೀವನ ರೂಪಿಸಿಕೊಳ್ಳಲು ಅರಿವು ಮೂಡಿಸುವುದು ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆ ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸಿ ಹೆಮ್ಮೆ ಮೂಡುವಂತೆ ಮಾಡುವ ಯೋಜನೆ ಹೊಂದಲಾಗಿದೆ ಎಂದರು.ಈ ಸಂದರ್ಭದಲ್ಲಿ ಡಾ. ಧನರಾಜ ರಾಗಾ ಅವರ ಅಮೃತ ಹಸ್ತದಿಂದ ಅನುಭವ ಮಂಟಪ ಉತ್ಸವದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಶಿಕ್ಷಕ ರವಿ ಡೋಳೆ ಅವರಿಗೆ ಸತ್ಕರಿಸಲಾಯಿತು. ಉಪನ್ಯಾಸಕ ಉತ್ತಮ, ತುಳಸಿರಾಮ ಮಾನೆ, ಮಹಾದೇವ ಶಿಂಧೆ, ಬಸವರಾಜ, ಪ್ರವೀಣ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರ
ಕುವೆಂಪು ಅವರ ಸ್ಮರಣಾರ್ಥ ಇಂದು ವಿಶ್ವ ಮಾನವ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ ೨೯ರ ವರೆಗೂ ಜಿಲ್ಲೆಯ ವಿವಿಧ ಶಾಲಾ ಕಾಲೇಜು, ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಸಂಯೋಜಿಸಿ ಕುವೆಂಪು ವಿಚಾರ ಕ್ರಾಂತಿ ಯಿಂದ ಜನರನ್ನು ಜಾಗೃತಗೊಳಿಸಲಾಗುವುದು.-ಬಾಲಾಜಿ ಅಮರವಾಡಿ, ಸಂಭ್ರಮ ಸಂಸ್ಥೆಯ ಸಂಚಾಲಕ
