
ಉದಯವಾಹಿನಿ, ಕಲಬುರಗಿ: ಸಾಲಬಾಧೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ ಯುವ ರೈತನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲ್ಲೂಕಿನ ಕೋಳಕೂರ್ ಸೀಮಾಂತರದಲ್ಲಿನ ಜಮೀನಿನಲ್ಲಿ ಸಂಭವಿಸಿದೆ.
ಮೃತನಿಗೆ ಭಾಗಣ್ಣ ಅಲಿಯಾಸ್ ಭಗವಂತರಾಯ್ ತಂದೆ ಪರಮಣ್ಣ ಭಾಸಗಿ (22) ಎಂದು ಗುರುತಿಸಲಾಗಿದೆ.
ರೈತ ಭಾಗಣ್ಣ ಹೆಸರಿನಲ್ಲಿ 2 ಎಕರೆ 24 ಗುಂಟೆ ಜಮೀನು ಇತ್ತು. ಪತ್ನಿ, ಓರ್ವ ಪುತ್ರಿ ಇದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 55000ರೂ.ಗಳು ಹಾಗೂ ಖಾಸಗಿ ಸಾಲವಾಗಿ 8.8 ಲಕ್ಷ ರೂ.ಗಳನ್ನು ಪಡೆದಿದ್ದ ಎನ್ನಲಾಗಿದೆ. ಮಳೆ ಕೈಕೊಟ್ಟು ಬೆಳೆ ನಾಶವಾಗಿದ್ದರಿಂದ ಪಡೆದ ಸಾಲ ತೀರಿಸುವ ಕುರಿತು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.ಶುಕ್ರವಾರ ಮಧ್ಯಾಹ್ನ ಹೊಲಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ್ದ. ಹೊಲದಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಈರಮ್ಮ ಗಂಡ ಭಾಗಣ್ಣ ಅಲಿಯಾಸ್ ಭಗವಂತರಾಯ್ ಭಾಸಗಿ ಅವರು ದೂರು ಸಲ್ಲಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
