ಉದಯವಾಹಿನಿ, ಕೊಟ್ಟೂರು: ಕರ್ನಾಟಕ ರಾಜ್ಯ ನಾಮಕರಣಗೊಂಡು 50 ವರ್ಷ ಪೂರೈಸಿದೆ ಈ ಸ್ಮರಣಾರ್ಥವಾಗಿ, ಘನ ಸರ್ಕಾರ ಕರ್ನಾಟಕದ ,ಇತಿಹಾಸ ಕಲೆ, ಸಾಹಿತ್ಯ, ನಾಡು, ನುಡಿ ಸಂಸ್ಕೃತಿಯ ಪ್ರತಿಯೊಬ್ಬರು ತಿಳಿಯಲೆಂದು ರಾಜ್ಯದಾದ್ಯಂತ ಕನ್ನಡದ ಜ್ಯೋತಿ ರಥಯಾತ್ರೆ ಕೈಗೊಂಡಿದೆ,ಇದು ನಮ್ಮ ಕನ್ನಡ ನಾಡಿನ ರಥೋತ್ಸವ,ಸಂಭ್ರಮದಿಂದ ಈ ರಥಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ತಹಶಿಲ್ದಾರ ಅಮರೇಶ್ ಜಿ.ಕೆ ಹೇಳಿದರು.
ಪಟ್ಟಣದ ಮರಿಕೊಟ್ಟೂರೇಶ್ವರ ದೇವಸ್ಥಾನದ ಬಳಿ ಶನಿವಾರ “ಕರ್ನಾಟಕ ಸಂಭ್ರಮ 50″ಅಂಗವಾಗಿ ಆಗಮಿಸಿದ್ದ ಕರ್ನಾಟಕ ಸಂಭ್ರಮ, 50 ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ, ಹೆಸರಿನ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಕನ್ನಡ ಭಾಷೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ, ಕನ್ನಡದ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ತಿಳಿದಿರಬೇಕು, ಹಾಗೆ
ಕರ್ನಾಟಕ ಏಕೀಕರಣ ಮತ್ತು ನಾಡು ನುಡಿಗಾಗಿ ದುಡಿದ ಮಹನೀಯರನ್ನು ನಾವುಗಳು ಆಗಾಗ ಸ್ಮರಿಸಬೇಕು ಎಂದರು.
ಶುಕ್ರವಾರ ತಾಲೂಕಿನ ಗಡಿ ಭಾಗ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿ “ಕನ್ನಡ ಜ್ಯೋತಿ ರಥ ಯಾತ್ರೆಗೆ” ಕೊಟ್ಟೂರು ತಾಲೂಕು ಆಡಳಿತ ಅದ್ದೂರಿಯಾಗಿ ಸ್ವಾಗತ ನೀಡಿ,ಪಟ್ಟಣಕ್ಕೆ ಬರಮಾಡಿಕೊಂಡಿತು.
ತಹಶಿಲ್ದಾರರಿಂದ ಚಾಲನೆ ಪಡೆದುಕೊಂಡ ಕನ್ನಡ ಜ್ಯೋತಿ ರಥಯಾತ್ರೆಯು ಪಟ್ಟಣದ ಎಪಿಎಂಸಿ ಮುಂಭಾಗದಿಂದ, ಬಸ್ ನಿಲ್ದಾಣ, ಗಾಂಧಿ ಸರ್ಕಲ್ ಹಾಗೂ ಉಜ್ಜಿನಿ ಸರ್ಕಲ್ ಮೂಲಕ ದಾರಿಯುದ್ದಕ್ಕೂ ಕನ್ನಡ ಕಂಪಿನ ಹಾಡುಗಳು ಸದ್ದುಮಾಡಿದವು ಇದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಗಮಿಸಿದ್ದ ಕಲಾ ತಂಡಗಳು ಕನ್ನಡ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದರು ಹಾಗೆ ಕನ್ನಡ ಅಭಿಮಾನಿಗಳು ಕನ್ನಡ ಪರ ಸಂಘಟನೆಗಳು ಸಂಘ ಸಂಸ್ಥೆಯ ಮುಖಂಡರು ಮೆರವಣಿಗೆಯಲ್ಲಿ ಕನ್ನಡ ಹಾಡಿಗೆ ಕುಣಿದು ಸಂಭ್ರಮಿಸಿದರು.
