ಉದಯವಾಹಿನಿ, ಹಾಸನ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಪಿಟೇಶನ್ ಇಟ್ಟಿರಲಿಲ್ಲ. ನಾನು ಆ ರೇಸ್‌ನಲ್ಲಿ ಇರಲಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಸ್ಪಷ್ಟಪಡಿಸಿದರು.
ನಗರದಲ್ಲಿ ಹಾಸನಾಂಬೆ ದೇವಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಸಂಘಟನೆ ಜವಾಬ್ದಾರಿಯನ್ನು ವಿಜಯೇಂದ್ರ ಅವರಿಗೆ ನೀಡಿದ್ದಾರೆ.
ಅವರಿಗೆ ರಾಜಕೀಯ ಜಾಣ್ಮೆ ಇದ್ದು, ಮತ್ತೊಬ್ಬರಿಗೆ ಜವಾಬ್ದಾರಿ ಕೊಟ್ಟಾಗ ಅದರ ವಿರುದ್ಧ ಮಾತನಾಡುವುದು ತಪ್ಪು. ಇದರಿಂದ ತಪ್ಪು ಸಂದೇಶ ಹೋಗಲಿದೆ. ಹಾಗಾಗಿ ಮಾತನಾಡುವುದಿಲ್ಲ’ ಎಂದರು.
ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರವಾಗಿ ನನ್ನ ಹಾಗೂ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ’ ಎಂದು ತಿಳಿಸಿದ ಅವರು, ‘ವಿಜಯೇಂದ್ರ ಅವರ ಆಯ್ಕೆ ಸಂಬಂಧ ಯಾವುದೇ ಅಸಮಾಧಾನ ಇಲ್ಲ’ ಎಂದು ಹೇಳಿದರು.
ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಲವು ರಾಜ್ಯಗಳಲ್ಲಿ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದು, ಯಾವುದೇ ಅವಕಾಶ ಸಿಕ್ಕಾಗ ಕೆಲಸ ಮಾಡುವೆ. ಯಾವುದನ್ನು ಕೇಳಿ ಪಡೆಯುವುದಿಲ್ಲ. ಕೇಳಲು ಹೋಗಿಲ್ಲ, ಕೊಡುವುದನ್ನು ಮಾಡುವುದು ಅಷ್ಟೇ. ವರಿಷ್ಠರು ಕೊಟ್ಟಿದ್ದನ್ನು ನಿರ್ವಹಿಸುವೆ. ಮುಂದಿನ ದಿನಗಳಲ್ಲಿ ಪಕ್ಷ ಜವಾಬ್ದಾರಿ ಕೊಡುವ ವಿಶ್ವಾಸವಿದ್ದು, ನನ್ನನ್ನು ಬಹಳ ಕಾಲ ಸುಮ್ಮನೆ ಕೂರಿಸುವುದಿಲ್ಲ, ಕೂರಿಸಲು ಆಗುವುದಿಲ್ಲ’ ಎಂದರು.
