ಉದಯವಾಹಿನಿ, ಆನೇಕಲ್: ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಈ ಬಾರಿ ಸಿಮೀತ ಮಳಿಗೆಗಳಲ್ಲಿ ಶನಿವಾರ ಪಟಾಕಿ ವ್ಯಾಪಾರ ಆರಂಭವಾಯಿತು. ಕಡಿಮೆ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದ ಕಾರಣ ಜನಸಂದಣಿ ಕಂಡು ಬಂದಿತು. ಇದರಿಂದ ಗಡಿ ಭಾಗದ ರಸ್ತೆಗಳಲ್ಲಿ ಕಿಲೋಮೀಟರ್ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.
ಹೈಕೋರ್ಟ್ ಆದೇಶದಂತೆ ಅತ್ತಿಬೆಲೆ ಹೋಬಳಿಯಲ್ಲಿ 22 ಪಟಾಕಿ ಮಳಿಗೆ ತೆರೆಯಲು ಹಾಗೂ ಪ್ರತಿ ಮಳಿಗೆಯಲ್ಲೂ 600 ಕೆ.ಜಿ ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ನ.11ರಿಂದ 17ವರೆಗೆ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಿದೆ.
ಪಟಾಕಿ ಮಳಿಗೆಗಳನ್ನು ತೆರೆಯುತ್ತಿದ್ದಂತೆ ಸಾವಿರಾರು ಜನರು ಖರೀದಿಗೆ ಮುಗಿಬಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆ ಕೂಡ ದುಬಾರಿಯಾಗಿದ್ದರೂ ಖರೀದಿ ಭರಾಟೆ ಜೋರಾಗಿಯೇ ನಡೆಯಿತು.
ಪ್ರತಿವರ್ಷ ಅತ್ತಿಬೆಲೆ ಗಡಿಭಾಗದಲ್ಲಿ ಹಬ್ಬದ ಒಂದು ವಾರದ ಹಿಂದೆಯೇ ಪಟಾಕಿ ಮಳಿಗೆ ತೆರೆಯಲಾಗುತ್ತಿತ್ತು. ಶೇ50ರಷ್ಟು ಪಟಾಕಿ ಮಾರಾಟವಾಗುತ್ತಿತ್ತು. ರಾಜ್ಯದ ವಿವಿಧ ಭಾಗಗಳ ಜನರು ಬಿರುಸಿನ ವ್ಯಾಪಾರ ನಡೆಸಿದರು. ಅತ್ತಿಬೆಲೆ, ಚಂದಾಪುರ, ನೆರಳೂರು ಮತ್ತು ಹೆಬ್ಬಗೋಡಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೆರೆದಿರುವ ಮಳಿಗೆಗಳ ಮುಂದೆ ಜನಸಾಗರ ಕಂಡು ಬಂದಿತು.
