ಉದಯವಾಹಿನಿ, ಹಾಸನ: ಪ್ರಸಿದ್ಧ ಹಾಸನಾಂಬದೇವಿಯ ೧೩ ದಿನಗಳ ದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಇದುವರೆಗೆ ಲಕ್ಞಾಂತರ ಭಕ್ತರು ಸರದಿ ಸಾಲಿನಲ್ಲಿ ನಿಂತು ಹಾಸನಾಂಬೆಯ ದರ್ಶನ ಪಡೆದು ಪುನೀತರಾದರು. ಇಂದು ಮಧ್ಯಾಹ್ನ ೧೨ ಗಂಟೆಗೆ ಅರ್ಚಕರು ಶಾಸ್ತ್ರೋಕ್ತವಾಗಿ ಗರ್ಭ ಗುಡಿಯ ಬಾಗಿಲನ್ನು ಮುಚ್ಚಿದರು.ಮತ್ತೆ ಒಂದು ವರ್ಷಗಳ ನಂತರವೇ ಭಕ್ತರಿಗೆ ಹಾಸನಾಂಬೆ ದರ್ಶನ ನೀಡಲಿದ್ದಾಳೆ.ಇಂದು ಮಧ್ಯಾಹ್ನ ೧೨ ಗಂಟೆ ಬಳಿಕ ವಿಶ್ವರೂಪ ದರ್ಶನದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.ಬಾಗಿಲು ಮುಚ್ಚುವ ಮುನ್ನ ನಿನ್ನೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತು. ಒಳಗೆ ಮತ್ತು ಹೊರಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರ್, ಮಾಜಿ ಸಚಿವ ವಿಜಯ್‌ಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಮೋಹನ್ ಸೇರಿದಂತೆ ಇನ್ನಿತರ ಗಣ್ಯರು ಹಾಸನಾಂಭೆ ದರ್ಶನ ಪಡೆದರು.
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ೧೩.೫ ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ನಿನ್ನೆ ಬೆಳಿಗ್ಗೆ ೬ ಗಂಟೆಯವರೆಗೂ ವಿಶೇಷ ದರ್ಶನದ ೧ ಸಾವಿರ ರೂ, ೩೦೦ ರೂ. ಹಾಗೂ ಲಾಡು ಮಾರಾಟದಿಂದ ೫,೭೯,೫೬,೪೬೦ ರೂ. ಹಣ ಸಂಗ್ರಹವಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಲಾಗಿದೆ.
