ಉದಯವಾಹಿನಿ, ಕೊಳ್ಳೇಗಾಲ: ‘ಸಹಕಾರ ಸಂಘಗಳು ರೈತರಿಗೆ, ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುತ್ತವೆ’ ಎಂದು ಕೆಎಂಎಫ್ ನಿರ್ದೇಶಕ ಎಂ.ನಂಜುಂಡಸ್ವಾಮಿ ಹೇಳಿದರು.ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆಯಿಂದ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
‘ಸಹಕಾರ ಸಂಘಗಳ ಯೋಜನೆಗಳು ಹಲವು ವರ್ಷಗಳ ಹಿಂದಿನಿಂದಲೂ ಇವೆ. ಈ ಯೋಜನೆಯಿಂದ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಕೃಷಿ ಚಟುವಟಿಕೆಗಳಿಗೆ, ವ್ಯಾಪಾರಿಗಳಿಗೆ ಹಾಗೂ ಹೈನುಗಾರಿಕೆ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದರ ಅಂಗವಾಗಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸುತ್ತಿದ್ದು, ಸಪ್ತಾಹದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಕರ್ನಾಟಕದಲ್ಲಿ ಸಹಕಾರ ಸಂಘ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದು ಸಾರ್ವಜನಿಕರ ಸೇವೆಯಲ್ಲಿ ಹೆಚ್ಚು ಅನುಕೂಲಕರವಾಗಿದೆ. ಹೈನುಗಾರಿಯಲ್ಲಿ ಮಹತ್ತರ ಬದಲಾವಣೆ ಕಾಣಬಹುದಾಗಿದೆ. ಮತ್ತಷ್ಟು ಅಭಿವೃದ್ಧಿಗಾಗಿ ಸಾಲಸೌಲಭ್ಯಗಳನ್ನು ಸರ್ಕಾರ ಒದಗಿಸುವ ಯೋಜನೆ ರೂಪಿಸಿದೆ. ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
