ಉದಯವಾಹಿನಿ, ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಹೋಗುವ ಪ್ರವಾಸಿಗರನ್ನು ಬೇಸಿಗೆ ಕಾಲದಲ್ಲಿ ಹೂವು ಅರಳಿಸಿ ಆಕರ್ಷಿಸುತ್ತಿದ್ದ ಮುತ್ತುಗದ ಮರ ಈ ಸಲ ನವೆಂಬರ್‌ನಲ್ಲೇ ಜನರನ್ನು ಸೆಳೆಯಲು ಆರಂಭಿಸಿವೆ.
ಬಂಡೀಪುರದ ಅರಣ್ಯದಲ್ಲಿರುವ ಕೆಲವು ಮುತ್ತುಗದ ಮರಗಳು ಅವಧಿಗೆ ಮುನ್ನವೇ ಹೂವುಗಳನ್ನು ಬಿಟ್ಟಿವೆ.
ಬೇಸಿಗೆ ಸಮೀಪಿಸುತ್ತಿದ್ದ ಹಾಗೆ ಮಾಗಿಯ ಚಳಿಯಲ್ಲಿ ಹಸಿರು ಹೊದ್ದ ಮರಗಳೆಲ್ಲ ಎಲೆ ಕಳಚಿ ಬೆತ್ತಲಾಗಿ ಹೂವನ್ನು ಬಿಡುತ್ತವೆ. ತಮ್ಮ ಹೊಸ ಚಿಗುರೆಲೆಗಳನ್ನೇ ಹೂವಾಗಿಸಿಕೊಂಡು ಪ್ರಕೃತಿಯ ಸೊಬಗನ್ನು ಇಮ್ಮಡಿ ಗೊಳಿಸುತ್ತವೆ. ಮುತ್ತುಗದಂತಹ ಮರಗಳು ಹೂವು ಬಿಟ್ಟಾಗ ಕಾಡಿಗೆ ಕಿಚ್ಚು ಹೊತ್ತಿಕೊಂಡಂತೆ ಭಾಸವಾಗುತ್ತದೆ.
