ಉದಯವಾಹಿನಿ, ವಿಜಯಪುರ: ಬರ ಪರಿಹಾರದ ಕೆಲಸ ಪ್ರಾರಂಭವಾಗಿದೆ. ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ. ಮೇವಿಗೆ ಅಭಾವವಿಲ್ಲ, ಜನರಿಗೆ ಕೆಲಸ ಕೊಡುವ ಕೆಲಸವೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಜಯಪುರ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಬಂದಾಗ 150 ದಿನಗಳ ಕೆಲಸ ನೀಡುವುದು ಕಡ್ಡಾಯ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ಅನುಮತಿ ಕೋರಿ ನಾವು ಪತ್ರ ಬರೆದಿದ್ದು ಇಂದಿನವರೆಗೂ ಉತ್ತರ ಬಂದಿಲ್ಲ ಎಂದರು.
ಬರ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿ ಒಂದು ತಿಂಗಳಾಗಿದೆ. ಕೇಂದ್ರ ಸರ್ಕಾರದ ಬರ ಅಧ್ಯಯನ ಕೇಂದ್ರ ಬಂದು ಹೋಗಿ ಒಂದು ತಿಂಗಳ ಮೇಲಾಗಿದ್ದರೂ ಇಂದಿನವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಎನ್.ಡಿ.ಆರ್‍ಎಫ್ ಮಾರ್ಗಸೂಚಿಯಲ್ಲಿ ಮಾರ್ಪಾಡು ತರಲು ಬರೆದಿರುವ ಪತ್ರಕ್ಕೂ ಕೆಂದ್ರದಿಂದ ಉತ್ತರವಿಲ್ಲ ಎಂದರು.
ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಈಗ ಮಧ್ಯ ಪ್ರದೇಶ ಹಾಗೂ ಇತರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಅಧಿಕಾರಲ್ಲಿದ್ದಾಗ ಏನು ಮಾಡದ ಬಿಜೆಪಿಯವರು ಈಗ ಜನಪ್ರಿಯ ಯೋಜನೆಗಳ ಬೆನ್ನು ಹತ್ತಿದ್ದಾರೆ. ಆದರೆ ಬಿಜೆಪಿಯವರು ನುಡಿದಂತೆ ನಡೆಯುವ ಜನ ಅಲ್ಲ. ಅವರು ಏನೇ ಹೇಳಿದರು ಸಾರ್ವಜನಿಕರು ನಂಬುವುದಿಲ್ಲ ಎಂದರು.
